ಭಾರತದ ಬಾಕ್ಸಿಂಗ್ ಸ್ಪರ್ಧಿ ಸಾಕ್ಷಿ
ಅಸ್ತಾನ (ಕಜಕಸ್ತಾನ): ಭಾರತದ ಬಾಕ್ಸರ್‌ಗಳಾದ ಸಾಕ್ಷಿ, ಜಾಸ್ಮಿನ್ ಹಾಗೂ ನೂಪುರ್ ಇಲ್ಲಿ ಇಲ್ಲಿ ನಡೆದ ಎರಡನೇ ವಿಶ್ವ ಬಾಕ್ಸಿಂಗ್ ಕಪ್‌ನಲ್ಲಿ ಚಿನ್ನ ಗೆದ್ದರು.
ಇದರೊಂದಿಗೆ, ಟೂರ್ನಿಯ ವಿವಿಧ ವಿಭಾಗಗಳಲ್ಲಿ ಭಾರತವು 11 ಪದಕಗಳನ್ನು (3 ಚಿನ್ನ, 5 ಬೆಳ್ಳಿ ಹಾಗೂ 3 ಕಂಚು) ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿತು. ಈ ಟೂರ್ನಿಯ ಮೊದಲ ಆವೃತ್ತಿಯು ಬ್ರೆಜಿಲ್‌ನಲ್ಲಿ ನಡೆದ ಸಂದರ್ಭದಲ್ಲಿ ಭಾರತ ತಂಡವು ಒಂದು ಚಿನ್ನ ಮತ್ತು ಬೆಳ್ಳಿ ಸೇರಿದಂತೆ ಆರು ಪದಕಗಳನ್ನು ಗೆದ್ದಿತ್ತು.
ಈ ಹಿಂದೆ ಎರಡು ಬಾರಿ ವಿಶ್ವ ಯೂತ್ ಬಾಕ್ಸಿಂಗ್ ಚಾಂಪಿಯನ್ ಕೂಡ ಆಗಿರುವ 24 ವರ್ಷದ ಸಾಕ್ಷಿ 54 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದರು. ನಿರ್ಣಾಯಕ ಬೌಟ್‌ನಲ್ಲಿ ಅವರು ಅಮೆರಿಕದ ಯೊಸಲಿನ್ ಪೆರೆಜ್ ವಿರುದ್ಧ ಜಯಿಸಿದರು. ಎದುರಾಳಿ ಮೇಲೆ ವೇಗ ಮತ್ತು ನಿಖರತೆ ಮೇಳೈಸಿದ್ದ ಪಂಚ್‌ಗಳ ಸುರಿಮಳೆ ಮಾಡಿದ ಸಾಕ್ಷಿ ಗೆದ್ದರು.
ಮಹಿಳೆಯರ 57 ಕೆ.ಜಿ ವಿಭಾಗದಲ್ಲಿ ಜಾಸ್ಮಿನ್ ಅವರು ಬ್ರೆಜಿಲ್‌ನ ಜೂಸಿಎಲೆನ್ ಸಿಕ್ವೆರಿಯಾ ಎದುರು 4–1ರಿಂದ ಗೆಲುವು ಸಾಧಿಸಿದರು. 80+ ಕೆ.ಜಿ. ವಿಭಾಗದಲ್ಲಿ ಭಾರತದ ನೂಪುರ್ ಅವರು ಆತಿಥೇಯ ಕಜಕಸ್ತಾನದ ಯೆಲ್ದಾನ ತಾಲಿಪೋವ ಅವರನ್ನು 5–0ರಿಂದ ಮಣಿಸಿದರು.
ಇದಕ್ಕೂ ಮುನ್ನ ಭಾರತದ ಮೀನಾಕ್ಷಿ ಅವರು 48 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಸ್ಥಳೀಯ ಸ್ಪರ್ಧಿ ನಜೀಂ ಕೈಝೈಬೆ ಅವರಿಂದ ಕಠಿಣ ಪೈಪೋಟಿ ಎದುರಿಸಿದರು. ಸ್ಥಳೀಯ ಬಾಕ್ಸರ್ 3–2ರಿಂದ ಗೆದ್ದರು. ಮೀನಾಕ್ಷಿ ಬೆಳ್ಳಿ ಗಳಿಸಿದರು.
ಪುರುಷರ 65 ಕೆ.ಜಿ ವಿಭಾಗದಲ್ಲಿ ಅಭಿನಾಶ್ ಜಾಮವಾಲ್, 70 ಕೆ.ಜಿ ವಿಭಾಗದಲ್ಲಿ ಹಿತೇಶ್ ಗುಲಿಯಾ, 85 ಕೆ.ಜಿ ವಿಭಾಗದಲ್ಲಿ ಜುಗನು ಮತ್ತು ಮಹಿಳೆಯರ 80 ಕೆ.ಜಿ ವಿಭಾಗದಲ್ಲಿ ಪೂಜಾರಾಣಿ ಅವರೂ ಬೆಳ್ಳಿಪದಕ ಜಯಿಸಿದರು.
ಜುಗನು ಅವರು ಫೈನಲ್ ಬೌಟ್‌ನಲ್ಲಿ 0–5ರಿಂದ ಕಜಕಸ್ತಾನದ ಬೆಕ್ಜಾದ್ ನುರ್ದುಲೆಟೋವ್ ವಿರುದ್ಧ ಸೋತರು. ಪೂಜಾ 0–5ರಿಂದ ಆಸ್ಟ್ರೇಲಿಯಾದ ಎಸೆಟಾ ಫ್ಲಿಂಟ್ ಎದುರು ಪರಾಭವಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.