ನವದೆಹಲಿ: ಪ್ಯಾರಾಲಿಂಪಿಕ್ ಕೂಟದ ಅಥ್ಲೆಟಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಐದು ಚಿನ್ನ ಸೇರಿದಂತೆ ಹತ್ತು ಪದಕಗಳನ್ನು ಜಯಿಸುವುದು ಖಚಿತ ಎಂದು ಪ್ಯಾರಾ ಅಥ್ಲೆಟಿಕ್ಸ್ ಮುಖ್ಯ ಕೋಚ್ ಸತ್ಯನಾರಾಯಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
'ಹೋದ ಸಲ ಟೋಕಿಯೊದಲ್ಲಿ ನಡೆದಿದ್ದ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಬಹುತೇಕ ಅಥ್ಲೀಟ್‌ಗಳು ಬೆಳ್ಳಿ ಮತ್ತು ಕಂಚು ಗೆದ್ದಿದ್ದರು. ಈ ಬಾರಿ ಆ ಪದಕಗಳನ್ನು ಬಂಗಾರದ ಬಣ್ಣಕ್ಕೆ ಪರಿವರ್ತಿಸುವ ಗುರಿ ನಮ್ಮದು’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಈ ಬಾರಿ ಎಲ್ಲ ಅಥ್ಲೀಟ್‌ಗಳಿಗೂ ಬಹಳ ವಿಶೇಷವಾದ ತರಬೇತಿ ನೀಡಲಾಗಿದೆ. ನಿರ್ದಿಷ್ಠ ತಂತ್ರಗಾರಿಕೆಗಳೊಂದಿಗೆ ತಾಲೀಮು ಕೊಡಲಾಗಿದೆ. ತಂಡದ ಬಹುತೇಕ ಎಲ್ಲ ಸದಸ್ಯರೂ ಪ್ಯಾರಿಸ್ ತಲುಪಿದ್ದಾರೆ. ಅಲ್ಲಿಯ ವಾತಾವರಣ ಮತ್ತು ಪರಿಸ್ಥಿತಿಗೆ ಹೊಂದಿಕೊಳ್ಳುತ್ತಿದ್ದಾರೆ. ಜೊತೆಗೆ ಅಭ್ಯಾಸವನ್ನೂ ಮುಂದುವರಿಸಿದ್ದಾರೆ’ ಎಂದು ವಿವರಿಸಿದ್ದಾರೆ.
ಅಥ್ಲೀಟ್‌ಗಳಾದ ಸುಮಿತ್ ಅಂಟಿಲ್ (ಪುರುಷರ ಜಾವೆಲಿನ್ ಥ್ರೋ; ಎಫ್64), ಮರಿಯಪ್ಪನ್ ತಂಗವೇಲು (ಪುರುಷರ ಹೈಜಂಪ್; ಟಿ42), ದೀಪ್ತಿ ಜೀವಂಜಿ (ಮಹಿಳೆಯರ 400 ಮೀ; ಟಿ20), ಸಚಿನ್ ಖಿಲಾರಿ (ಪುರುಷರ ಶಾಟ್‌ಪಟ್; ಎಫ್46), ಏಕತಾ ಬಯಾನ್ (ಮಹಿಳೆಯರ ಕ್ಲಬ್ ಥ್ರೋ; ಎಫ್ 52) ಮತ್ತು ಸಿಮ್ರನ್ ಶರ್ಮಾ (ಮಹಿಳೆಯರ 200 ಮೀ; ಟಿ 12) ಪದಕ ಜಯದ ಭರವಸೆ ಮೂಡಿಸಿದ್ದಾರೆ.
ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ತಂಡವು ಒಟ್ಟು 19 ಪದಕ ಜಯಿಸಿ, 24ನೇ ಸ್ಥಾನ ಪಡೆದಿತ್ತು. ಅದರಲ್ಲಿ ಐದು ಚಿನ್ನ, ಎಂಟು ಬೆಳ್ಳಿ ಮತ್ತು ಆರು ಕಂಚಿನ ಪದಕಗಳು ಇದ್ದವು. ಆ ಕೂಟದಲ್ಲಿ ಅಥ್ಲೆಟಿಕ್ಸ್‌ನಿಂದ ಎಂಟು ಪದಕಗಳು (1 ಚಿನ್ನ, 5 ಬೆಳ್ಳಿ ಮತ್ತು 2 ಕಂಚು) ಸಂದಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.