ADVERTISEMENT

ಜೂನಿಯರ್ ಮಹಿಳೆಯರ ಏಷ್ಯಾ ಕಪ್ ಹಾಕಿ ಟೂರ್ನಿ: ಫೈನಲ್‌ಗೆ ಭಾರತ ಲಗ್ಗೆ

ಪಿಟಿಐ
Published 14 ಡಿಸೆಂಬರ್ 2024, 16:13 IST
Last Updated 14 ಡಿಸೆಂಬರ್ 2024, 16:13 IST
<div class="paragraphs"><p> ಹಾಕಿ </p></div>

ಹಾಕಿ

   

ಪ್ರಾತಿನಿಧಿಕ ಚಿತ್ರ

ಮಸ್ಕತ್: ಹಾಲಿ ಚಾಂಪಿಯನ್ ಭಾರತ ವನಿತೆಯರ ತಂಡವು ಜೂನಿಯರ್ ಏಷ್ಯಾ ಕಪ್ ಹಾಕಿ ಟೂರ್ನಿಯ ಫೈನಲ್ ಪ್ರವೇಶಿಸಿತು. 

ADVERTISEMENT

ಶನಿವಾರ ಇಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಭಾರತ ತಂಡವು 3–1ರಿಂದ ಜಪಾನ್ ಎದುರು ಜಯಿಸಿತು. 

ಮುಮ್ತಾಜ್ ಖಾನ್ (4ನೇ ನಿಮಿಷ), ಸಾಕ್ಷಿ ರಾಣಾ (5ನಿ), ದೀಪಿಕಾ (13ನಿ) ಅವರು ಗೋಲು ಹೊಡೆದು ಭಾರತ ತಂಡದ ಗೆಲುವಿಗೆ ಕಾರಣರಾದರು. ಜಪಾನ್ ತಂಡದ ನಿಕೊ ಮರುಯಾಮಾ 23ನೇ ನಿಮಿಷದಲ್ಲಿ ಗೋಲು ಗಳಿಸಿದರು. 

ಪಂದ್ಯದ ಆರಂಭದಿಂದಲೂ ಭಾರತ ತಂಡವು ಪಾರಮ್ಯ ಮರೆಯಿತು. ಕೊನೆಯವರೆಗೂ ಪಂದ್ಯದ ಅವಧಿಯು ಏಕಪಕ್ಷೀಯವಾಗಿತ್ತು. ಮೊದಲ ಕ್ವಾರ್ಟರ್‌ನಲ್ಲಿ ಜಪಾನ್ ತಂಡಕ್ಕೆ ಡ್ರ್ಯಾಗ್‌ ಫ್ಲಿಕ್ ಅವಕಾಶ  ಒದಗಿತ್ತು. ಆದರೆ ಅದು ಗೋಲಿನಲ್ಲಿ ಪರಿವರ್ತನೆಯಾಗಲು ಸುನಿಲಿತಾ ಟೊಪೊ ಬಿಡಲಿಲ್ಲ. 

ಇದಾಗಿ ಎರಡು ನಿಮಿಷಗಳ ನಂತರ ಭಾರತ ತಂಡವು 1–0 ಮುನ್ನಡೆ ಸಾಧಿಸಲು ಮುಮ್ತಾಜ್ ಕಾರಣರಾದರು. ರೈಟ್‌ ಫ್ಲ್ಯಾಂಕ್‌ನಿಂದ ಬಂದ ಚೆಂಡನ್ನು ತಡೆಯಲು ಜಪಾನಿ ಡಿಫೆಂಡರ್ಸ್ ಮತ್ತು ಗೋಲಕೀಪರ್‌ಗಳು ಮುನ್ನುಗಿದರು. ಈ ಹಂತದಲ್ಲಿ ಮುಮ್ತಾಜ್ ಅವರು ಚೆಂಡನ್ನು ಗೋಲುಪೆಟ್ಟಿಗೆ ಪುಷ್ ಮಾಡಿದರು.

ನಂತರದ ನಿಮಿಷದಲ್ಲಿ ಸಾಕ್ಷಿ ರಾಣಾ ತಂಡಕ್ಕೆ ಎರಡನೇ ಗೋಲಿನ ಕಾಣಿಕೆ ನೀಡಿದರು. ಇದರಿಂದಾಗಿ ತಂಡವುಉತ್ತಮ ಮುನ್ನಡೆ ಸಾಧಿಸಿತು. 13ನೇ ನಿಮಿಷದಲ್ಲಿ ದೀಪಿಕಾ ಅವರೂ ಒಂದು ಗೋಲು ಗಳಿಸಿದರು. 

ನಂತರದ ಅವಧಿಯಲ್ಲಿ ರಕ್ಷಣಾತ್ಮಕ ಆಟಗಾರರು ಜಪಾನ್ ಆಟಗಾರ್ತಿಯರಿಗೆ ಅಡ್ಡಗಾಲು ಹಾಕಿದರು. ಗೋಲು ಗಳಿಸಲು ಅವಕಾಶ ನೀಡಲಿಲ್ಲ. ಇದರ ನಡುವೆಯೂ ನಿಕೊ ಅವರು ಭಾರತದ ಗೋಲ್‌ಕೀಪರ್ ಕಣ್ತಪ್ಪಿಸಿ ಒಂದು ಗೋಲು ಹೊಡೆದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.