ADVERTISEMENT

ಚಳಿಗಾಲದ ವಿಶೇಷ ಒಲಿಂಪಿಕ್‌ ಕೂಟ: 33 ಪದಕಗಳೊಂದಿಗೆ ಭಾರತದ ಅಭಿಯಾನಕ್ಕೆ ತೆರೆ

ಪಿಟಿಐ
Published 16 ಮಾರ್ಚ್ 2025, 22:47 IST
Last Updated 16 ಮಾರ್ಚ್ 2025, 22:47 IST
ಕಂಚಿನ ಪದಕ ಗೆದ್ದ ಆಕೃತಿ
ಕಂಚಿನ ಪದಕ ಗೆದ್ದ ಆಕೃತಿ   

ನವದೆಹಲಿ: ಭಾರತದ ಕ್ರೀಡಾಪಟುಗಳು ಇಟಲಿಯ ಟುರಿನ್‌ನಲ್ಲಿ ನಡೆದ ಚಳಿಗಾಲದ ವಿಶೇಷ ಒಲಿಂಪಿಕ್‌ ಕೂಟದ ಕೊನೆಯ ದಿನವಾದ ಶನಿವಾರ ನಾಲ್ಕು ಸ್ಪರ್ಧೆಗಳಲ್ಲಿ 12 ಪದಕಗಳನ್ನು ಕೊರಳಿಗೇರಿಸಿಕೊಂಡಿತು. ಒಟ್ಟು 33 ಪದಕಗಳೊಂದಿಗೆ ಅಭಿಯಾನವನ್ನು ಮುಗಿಸಿದರು.

ಮಾರ್ಚ್‌ 8ರಿಂದ ನಡೆದ ಕೂಟದಲ್ಲಿ 100 ದೇಶಗಳಿಂದ 1500ಕ್ಕೂ ಅಧಿಕ ಅಥ್ಲೀಟ್‌ಗಳು ಭಾಗವಹಿಸಿದ್ದರು. ಭಾರತದ ಕ್ರೀಡಾಪಟುಗಳು ಎಂಟು ಚಿನ್ನ, 18 ಬೆಳ್ಳಿ ಮತ್ತು ಏಳು ಕಂಚಿನ ಪದಕ ಜಯಿಸಿದರು.

ಭಾರತ ತಂಡವು ಸ್ನೋ ಶೂಯಿಂಗ್ ಮತ್ತು ಆಲ್ಪೈನ್ ಸ್ಕೀಯಿಂಗ್‌ನಲ್ಲಿ ತಲಾ 10 ಪದಕ ಹಾಗೂ ಸ್ನೋ ಬೋರ್ಡಿಂಗ್‌ನಲ್ಲಿ ಆರು ಪದಕ ಗೆದ್ದಿತು. ಶಾರ್ಟ್ ಟ್ರ್ಯಾಕ್ ಸ್ಪೀಡ್ ಸ್ಕೇಟಿಂಗ್, ಕ್ರಾಸ್ ಕಂಟ್ರಿ ಸ್ಕೀಯಿಂಗ್ ಮತ್ತು ಫ್ಲೋರ್‌ಬಾಲ್‌ಗಳಲ್ಲಿ ಕ್ರಮವಾಗಿ ನಾಲ್ಕು, ಎರಡು ಮತ್ತು ಒಂದು ಪದಕ ಜಯಿಸಿತು.

ADVERTISEMENT

ಸ್ನೋ ಶೂಯಿಂಗ್‌ನಲ್ಲಿ ಭಾರತದ ಸ್ಪರ್ಧಿಗಳು ಕೊನೆಯ ದಿನ ನಾಲ್ಕು ಪದಕಗಳನ್ನು ಗೆದ್ದರು. 25 ಮೀಟರ್ ಸ್ನೋ ಶೂಯಿಂಗ್‌ನಲ್ಲಿ ವಾಸು ತಿವಾರಿ, ಶಾಲಿನಿ ಚೌಹಾಣ್ ಮತ್ತು ತಾನ್ಯಾ ತಲಾ ಬೆಳ್ಳಿ ಪದಕ ಗೆದ್ದರೆ, ಅದೇ ವಿಭಾಗದಲ್ಲಿ ಜಹಾಂಗೀರ್ ಕಂಚಿನ ಪದಕ ಜಯಿಸಿದರು.

ಆಲ್ಪೈನ್ ಸ್ಕೀಯಿಂಗ್ ವಿಭಾಗದ ಸ್ಪರ್ಧೆಯಲ್ಲೂ ಭಾರತದ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿದರು. ರಾಧಾ ದೇವಿ ಮತ್ತು ನಿರ್ಮಲಾ ದೇವಿ ಅವರು ಇಂಟರ್‌ ಮಿಡಿಯೆಟ್ ಸ್ಲಾಲೋಮ್‌ನಲ್ಲಿ (ಕ್ರಮವಾಗಿ ಎಫ್‌ 01 ಮತ್ತು ಎಫ್‌ 04) ಬೆಳ್ಳಿ ಪದಕಗಳನ್ನು ಗೆದ್ದರು. ಅಭಿಷೇಕ್ ಕುಮಾರ್ ಅವರು ನೊವೈಸ್ ಸ್ಲಾಲೋಮ್‌ನಲ್ಲಿ (ಎಂ 02) ಮತ್ತೊಂದು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು.

ಆಕೃತಿ ಅವರು ಕ್ರಾಸ್ ಕಂಟ್ರಿ ಸ್ಕೀಯಿಂಗ್‌ನ 100 ಮೀಟರ್ ಕ್ಲಾಸಿಕಲ್ ಟೆಕ್ನಿಕ್‌ನಲ್ಲಿ (ಎಫ್‌ 02)  ಕಂಚಿನ ಪದಕ ಗೆದ್ದರು. ಫ್ಲೋರ್‌ಬಾಲ್ ಸ್ಪರ್ಧೆಯಲ್ಲಿ ಭಾರತದ ಮಹಿಳಾ ತಂಡವು ಉತ್ತಮ ಕೌಶಲ ಪ್ರದರ್ಶಿಸಿ ಕಂಚು ಗೆದ್ದುಕೊಂಡಿತು.

ಬೆಳ್ಳಿ ಪದಕ ಗೆದ್ದ ಅಭಿಷೇಕ್‌ ಕುಮಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.