ADVERTISEMENT

ಮಹಿಳಾ ವಿಶ್ವಕಪ್ ಹಾಕಿ: ಟೂರ್ನಿ ಚೀನಾ ಎದುರಾಳಿ

ಪಿಟಿಐ
Published 4 ಜುಲೈ 2022, 16:24 IST
Last Updated 4 ಜುಲೈ 2022, 16:24 IST
ಗುರ್ಜಿತ್ ಕೌರ್‌– ಪಿಟಿಐ ಚಿತ್ರ
ಗುರ್ಜಿತ್ ಕೌರ್‌– ಪಿಟಿಐ ಚಿತ್ರ   

ಆ್ಯಮ್‌ಸ್ಟಲ್‌ವೀನ್‌ (ನೆದರ್ಲೆಂಡ್ಸ್): ಈ ಬಾರಿಯ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿರುವ ಭಾರತ ಮಹಿಳಾ ತಂಡವು ಮಂಗಳವಾರ ಚೀನಾ ತಂಡಕ್ಕೆ ಮುಖಾಮುಖಿಯಾಗಲಿದೆ.

ಭಾನುವಾರ ನಡೆದ ಬಿ ಗುಂಪಿನ ಪಂದ್ಯದಲ್ಲಿ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತ ಇಂಗ್ಲೆಂಡ್ ತಂಡದ ಎದುರು 1–1ರಿಂದ ಡ್ರಾ ಸಾಧಿಸಿದ್ದ ಭಾರತ, ಡಿಫೆನ್ಸ್‌ ವಿಭಾಗದಲ್ಲಿ ಉತ್ತಮ ಸಾಮರ್ಥ್ಯ ತೋರಿತ್ತು. ಚೀನಾ ಎದುರು ಗೆಲುವು ಪಡೆಯಬೇಕಾದರೆ ಆಕ್ರಮಣ ವಿಭಾಗವು ಪರಿಣಾಮಕಾರಿ ಆಟವಾಡಬೇಕಿದೆ.

ಇಂಗ್ಲೆಂಡ್ ಎದುರು ಉಪನಾಯಕಿ ದೀಪ್ ಗ್ರೇಸ್ ಎಕ್ಕಾ, ನಿಕ್ಕಿ ಪ್ರಧಾನ್‌, ಗುರ್ಜಿತ್ ಕೌರ್‌ ಮತ್ತು ಉದಿತಾ ಅವರಿದ್ದ ಡಿಫೆನ್ಸ್ ವಿಭಾಗವು ಇಂಗ್ಲೆಂಡ್ ತಂಡಕ್ಕೆ ಒಂದೂ ಪೆನಾಲ್ಟಿ ಕಾರ್ನರ್ ಅವಕಾಶ ನೀಡಿರಲಿಲ್ಲ. ನಾಯಕಿ, ಗೋಲ್‌ಕೀಪರ್ ಸವಿತಾ ಪೂನಿಯಾ ಕೂಡ ಎದುರಾಳಿ ತಂಡದ ಹಲವು ಗೋಲು ಪ್ರಯತ್ನಗಳನ್ನು ಯಶಸ್ವಿಯಾಗಿ ತಡೆದಿದ್ದರು.

ADVERTISEMENT

ಚೀನಾ ಕೂಡ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‌ ಎದುರು 2–2ರಿಂದ ಡ್ರಾ ಸಾಧಿಸಿತ್ತು.

ಎಫ್‌ಐಎಚ್‌ ಪ್ರೊ ಲೀಗ್ ಟೂರ್ನಿಯ ಮೊದಲ ಲೆಗ್‌ನಲ್ಲಿ ಭಾರತ 7–1ರಿಂದ ಮತ್ತು ಎರಡನೇ ಲೆಗ್‌ನಲ್ಲಿ 2–1ರಿಂದ ಚೀನಾಕ್ಕೆ ಸೋಲುಣಿಸಿತ್ತು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಎಂಟನೇ ಸ್ಥಾನದಲ್ಲಿರುವ ಭಾರತ ಮತ್ತು 13ನೇ ಕ್ರಮಾಂಕದ ಚೀನಾ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.