
ಗೋಲು ಗಳಿಸಿದ ಸಂಭ್ರಮದಲ್ಲಿ ಭಾರತ ತಂಡದ ಆಟಗಾರರು ಎಕ್ಸ್ ಚಿತ್ರ
ಮದುರೈ: ಮನ್‌ದೀಪ್ ಸಿಂಗ್ ಮತ್ತು ಶಾರದಾನಂದ ತಿವಾರಿ ಅವರ ಅಮೋಘ ಆಟದ ನೆರವಿನಿಂದ ಭಾರತ ತಂಡವು ಮಂಗಳವಾರ ಎಫ್‌ಐಎಚ್ ಜೂನಿಯರ್ ಪುರುಷರ ಹಾಕಿ ವಿಶ್ವಕಪ್‌ನ ಪಂದ್ಯದಲ್ಲಿ 5–0ರಿಂದ ಸ್ವಿಟ್ಜರ್ಲೆಂಡ್ ತಂಡವನ್ನು ಮಣಿಸಿ, ಅಜೇಯವಾಗಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಹಾಕಿತು.
ಆಡಿರುವ ಮೂರೂ ಪಂದ್ಯಗಳನ್ನು ಗೆದ್ದು 9 ಅಂಕಗಳೊಂದಿಗೆ ಆತಿಥೇಯ ತಂಡವು ಬಿ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಿತು. 20ನೇ ವರ್ಷದ ಜನ್ಮದಿನದ ಸಂಭ್ರಮದಲ್ಲಿದ್ದ ಮನ್‌ದೀಪ್ ಅವರು ಎರಡು ಫೀಲ್ಡ್ ಗೋಲುಗಳ ಕಾಣಿಕೆ ನೀಡಿದರೆ, ತಿವಾರಿ ಅವರು ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಗೋಲಾಗಿ ಪರಿವರ್ತಿಸಿದರು. ಮತ್ತೊಂದು ಗೋಲು ಅರ್ಷದೀಪ್ ಸಿಂಗ್ ಅವರಿಂದ ದಾಖಲಾಯಿತು.
ಸ್ವಿಟ್ಜರ್ಲೆಂಡ್ ತಂಡವು ಉತ್ತಮ ಆರಂಭ ಪಡೆದು, ಮೊದಲ ನಿಮಿಷದಲ್ಲೇ ಎರಡು ಪೆನಾಲ್ಟಿ ಕಾರ್ನರ್ ಪಡೆಯಿತು. ಆದರೆ, ಭಾರತದ ಆಟಗಾರರು ಗೋಲು ಅವಕಾಶಗಳನ್ನು ವಿಫಲಗೊಳಿಸಿದರು. ಮರು ನಿಮಿಷದಲ್ಲೇ ದಿಲ್‌ರಾಜ್ ಅವರಿಂದ ಪಾಸ್ ಪಡೆದ ಮನ್‌ಪ್ರೀತ್, ಭಾರತ ತಂಡಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು.
ಮನ್‌ಪ್ರೀತ್ ಅವರು 11ನೇ ನಿಮಿಷದಲ್ಲಿ ಮತ್ತೊಮ್ಮೆ ಅಮೋಘವಾಗಿ ಚೆಂಡನ್ನು ಗುರಿ ಸೇರಿಸಿ ಭಾರತದ ಮುನ್ನಡೆಯನ್ನು ದ್ವಿಗುಣಗೊಳಿಸಿದರು. ಅದಾದ ಎರಡನೇ ನಿಮಿಷದಲ್ಲಿ ತಿವಾರಿ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ದಾಖಲಿಸಿದರು. ಹೀಗಾಗಿ, ಮೊದಲ ಕ್ವಾರ್ಟರ್‌ನಲ್ಲೇ 3–0 ಮುನ್ನಡೆ ಪಡೆದ ಭಾರತ ತಂಡವು ನಂತರದಲ್ಲಿ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿತು. ಅರ್ಷದೀಪ್ 28ನೇ ನಿಮಿಷದಲ್ಲಿ ಆಕರ್ಷಕ ರಿವರ್ಸ್ ಸ್ಲ್ಯಾಪ್ ಶಾಟ್ ಮೂಲಕ ಗೋಲು ಗಳಿಸಿ ಭಾರತದ ಮುನ್ನಡೆಯನ್ನು ಹೆಚ್ಚಿಸಿದರು.
ಮೂರನೇ ಕ್ವಾರ್ಟರ್‌ನಲ್ಲಿ ಯಾವುದೇ ತಂಡಕ್ಕೆ ಗೋಲು ಲಭಿಸಲಿಲ್ಲ. ಕೊನೆಯ ಕ್ವಾರ್ಟರ್ ನಲ್ಲಿ ಭಾರತಕ್ಕೆ ಲಭಿಸಿದ ಐದು ಪೆನಾಲ್ಟಿ ಕಾರ್ನರ್‌ಗಳ ಪೈಕಿ ಒಂದರಲ್ಲಿ ಮಾತ್ರ ಗೋಲು ದಾಖಲಿಸಲು ಸಾಧ್ಯವಾಯಿತು. 54ನೇ ನಿಮಿಷದಲ್ಲಿ ತಿವಾರಿ, ಚೆಂಡನ್ನು ಗುರಿ ಸೇರಿಸಿದರು. ಭಾರತವು ಒಟ್ಟು ಎಂಟು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಕೈಚೆಲ್ಲಿತು.
ರೋಹಿತ್ ನಾಯಕತ್ವ ಭಾರತ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ಶುಕ್ರವಾರ ಬೆಲ್ಜಿಯಂ ತಂಡವನ್ನು ಎದುರಿಸಲಿದೆ.
ಸ್ಪೇನ್, ಬೆಲ್ಜಿಯಂ ಕಾರ್ಟರ್‌ಗೆ: ಸ್ಪೇನ್ ತಂಡವು 13–0 ಗೋಲುಗಳಿಂದ ನಮೀಬಿಯಾ ತಂಡವನ್ನು ಮಣಿಸಿ ಡಿ ಗುಂಪಿನಲ್ಲಿ ಅಗ್ರಸ್ಥಾನದೊಂದಿಗೆ ಕಾರ್ಟರ್ ಫೈನಲ್‌ಗೆ ಮುನ್ನಡೆಯಿತು.
ಇದೇ ಗುಂಪಿನ ಮತ್ತೊಂದು ಪಂದ್ಯದಲ್ಲಿ ಬೆಲ್ಜಿಯಂ 10-0 ಅಂತರ ದಿಂದ ಈಜಿಪ್ಟ್ ತಂಡವನ್ನು ಸೋಲಿಸಿ, ಎರಡನೇ ಅತ್ಯುತ್ತಮ ಸ್ಥಾನದೊಂದಿಗೆ ನಾಕೌಟ್‌ಗೆ ಅರ್ಹತೆ ಪಡೆಯಿತು.
ನೆದರ್ಲೆಂಡ್ಸ್ ತಂಡವು 11–0 ಗೋಲುಗಳಿಂದ ಆಸ್ಟ್ರಿಯಾ ತಂಡವನ್ನು ಮಣಿಸಿ ಇ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಕ್ವಾರ್ಟರ್ ಫೈನಲ್‌ಗೆ ಟಿಕೆಟ್ ಪಡೆಯಿತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.