ADVERTISEMENT

ಹಾಕಿ ಭಾರತ ಯುವ ತಂಡ ಫೈನಲ್‌ಗೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2019, 19:46 IST
Last Updated 16 ಅಕ್ಟೋಬರ್ 2019, 19:46 IST

ಜೊಹೊರ್ ಬಹ್ರು, ಮಲೇಷ್ಯಾ: ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಪ್ರಬುದ್ಧ ಆಟವಾಡಿದ ಭಾರತ ಯುವ ಹಾಕಿ ತಂಡ ಸುಲ್ತಾನ್ ಆಫ್ ಜೊಹೊರ್ ಕಪ್ ಟೂರ್ನಿಯ ಫೈನಲ್ ಪ್ರವೇಶಿಸಿದೆ. ಬುಧವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಯುವ ಪಡೆ 5–1 ಗೋಲುಗಳ ಗೆಲುವು ಸಾಧಿಸಿತು.

ತಮನ್ ದಯಾ ಹಾಕಿ ಕ್ರೀಡಾಂಗಣದಲ್ಲಿ ಶಿಲಾನಂದ ಲಾಕ್ರ, ದಿಲ್‌ಪ್ರೀತ್‌ ಸಿಂಗ್, ಗುರುಸಾಹೀಬ್ ಜೀಗ್ ಸಿಂಗ್ ಮತ್ತು ಮನದೀಪ್ ಮೋರ್ ಮಿಂಚು ಹರಿಸಿದರು. 26ನೇ ನಿಮಿಷದಲ್ಲಿ ಪಂದ್ಯದ ಮೊದಲ ಗೋಲು ದಾಖಲಿಸಿದಶಿಲಾನಂದ 29ನೇ ನಿಮಿಷದಲ್ಲಿ ಮುನ್ನಡೆ ಹೆಚ್ಚಿಸಿದರು. ದಿಲ್‌ಪ್ರೀತ್‌ 44ನೇ ನಿಮಿಷದಲ್ಲೂ ಗುರುಸಾಹೀಬ್‌ಜೀತ್ 48ನೇ ನಿಮಿಷದಲ್ಲೂ ಮನದೀಪ್ 50ನೇ ನಿಮಿಷದಲ್ಲೂ ಚೆಂಡನ್ನು ಗುರಿ ಮುಟ್ಟಿಸಿದರು.

ಎದುರಾಳಿಗಳು ಮಾಡಿದ ತಪ್ಪಿನಿಂದಾಗಿ ಮೊದಲ ನಿಮಿಷದಲ್ಲೇ ಭಾರತಕ್ಕೆ ಗೋಲು ಗಳಿಸುವ ಅವಕಾಶ ಲಭಿಸಿತ್ತು. ಗುರುಸಾಹೀಬ್‌ಜೀತ್ ಚೆಂಡನ್ನು ಗುರಿ ಮುಟ್ಟಿಸಲು ಪ್ರಯತ್ನಿಸಿದರು. ಆದರೆ ಗೋಲ್‌ಕೀಪರ್ ರಾಬರ್ಟ್ ಮೆಕ್ಲೆನಾನ್ ಈ ಪ್ರಯತ್ನ ತಡೆಯುವಲ್ಲಿ ಯಶಸ್ವಿಯಾದರು. ನಂತರ ಮೊದಲ ಕ್ವಾರ್ಟರ್‌ನಲ್ಲಿ ಉಭಯ ತಂಡಗಳೂ ಚೆಂಡಿನ ಮೇಲೆ ಪ್ರಾಬಲ್ಯ ಸ್ಥಾಪಿಸಲು ಸೆಣಸಿದವು.

ADVERTISEMENT

ಎರಡನೇ ಕ್ವಾರ್ಟರ್‌ನಲ್ಲಿ ದಿಲ್‌ಪ್ರೀತ್ ನೀಡಿದ ನಿಖರ ಪಾಸ್‌ ನಿಯಂತ್ರಿಸಿದ ಲಾಕ್ರ ಆಸ್ಟ್ರೇಲಿಯಾದ ರಕ್ಷಣಾ ವಿಭಾಗದ ಆಟಗಾರರನ್ನು ದಂಗುಬಡಿಸಿ ಗುರಿ ಸಾಧಿಸಿದರು. ಮೊದಲಾರ್ಧದ ಕೊನೆಯ ನಿಮಿಷದಲ್ಲಿ ತಿರುಗೇಟು ನೀಡಲು ಆಸ್ಟ್ರೇಲಿಯಾಗೆ ಅವಕಾಶ ಒದಗಿತ್ತು. ಆದರೆ ಗೋಲ್‌ಕೀಪರ್ ಪ್ರಶಾಂತ್ ಚೌಹಾಣ್ ಅದನ್ನು ತಡೆದರು. ಭಾರತದ ಎರಡನೇ ಗೋಲು ಕೂಡ ದಿಲ್‌ಪ್ರೀತ್‌ ಮತ್ತು ಲಾಕ್ರ ಜೋಡಿಯ ಕೈಚಳಕದಿಂದಲೇ ಮೂಡಿತು. ಎರಡು ಗೋಲುಗಳ ಮುನ್ನಡೆಯ ನಂತರವೂ ಭಾರತದ ಆಧಿಪತ್ಯ ಮುಂದುವರಿಯಿತು. ಒಂದು ಗೋಲನ್ನಷ್ಟೇ ಬಿಟ್ಟುಕೊಟ್ಟು ಸಮಾಧಾನಪಟ್ಟುಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.