ADVERTISEMENT

ಜೂನಿಯರ್ ಮಹಿಳೆಯರ ಮೂರು ರಾಷ್ಟ್ರಗಳ ಹಾಕಿ ಟೂರ್ನಿ: ಭಾರತ ಶುಭಾರಂಭ

ನ್ಯೂಜಿಲೆಂಡ್ ವಿರುದ್ಧ ಜಯ

ಪಿಟಿಐ
Published 4 ಡಿಸೆಂಬರ್ 2019, 15:33 IST
Last Updated 4 ಡಿಸೆಂಬರ್ 2019, 15:33 IST
ಭಾರತ ಮತ್ತು ನ್ಯೂಜಿಲೆಂಡ್ ಆಟಗಾರ್ತಿಯರು ಚೆಂಡಿನ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದರು –ಪಿಟಿಐ ಚಿತ್ರ
ಭಾರತ ಮತ್ತು ನ್ಯೂಜಿಲೆಂಡ್ ಆಟಗಾರ್ತಿಯರು ಚೆಂಡಿನ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದರು –ಪಿಟಿಐ ಚಿತ್ರ   

ಕ್ಯಾನ್ಬೆರಾ, ಆಸ್ಟ್ರೇಲಿಯಾ: ಭಾರತ ಜೂನಿಯರ್ ಮಹಿಳಾ ತಂಡ ಮೂರು ರಾಷ್ಟ್ರಗಳ ಹಾಕಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಬುಧವಾರ ನಡೆದ ಮೊದಲ ಪಂದ್ಯದಲ್ಲಿ ಭಾರತ 2–0 ಗೋಲುಗಳಿಂದ ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಿತು.

ಸ್ಟ್ರೈಕರ್ ಲಾಲ್‌ರಿಂಡ್ಕಿನಿ (15ನೇ ನಿಮಿಷ) ಮತ್ತು ಪ್ರಭುಲೀನ್ ಕೌರ್ (60ನೇ ನಿ) ಗಳಿಸಿದ ಗೋಲುಗಳು ಭಾರತಕ್ಕೆ ಜಯ ತಂದುಕೊಟ್ಟವು. ಮಂಗಳವಾರ ಟೂರ್ನಿಯ ಮೊದಲ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾವನ್ನು ನ್ಯೂಜಿಲೆಂಡ್ 3–1 ಗೋಲುಗಳಿಂದ ಮಣಿಸಿತ್ತು. ಆ ಫಲಿತಾಂಶ ಭಾರತ ತಂಡದ ಆಟಗಾರ್ತಿಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿಲ್ಲ. ಆರಂಭದಿಂದಲೇ ಅಮೋಘ ಆಟವಾಡಿದ ತಂಡ ಎದುರಾಳಿಗಳನ್ನು ಕಂಗೆಡಿಸಿತು.

ಆಕ್ರಮಣಕಾರಿ ಆಟಕ್ಕೆ ಮೊರೆ ಹೋದ ಭಾರತ ಮಹಿಳೆಯರಿಗೆ ಮೂರನೇ ನಿಮಿಷದಲ್ಲೇ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತ್ತು. ಆದರೆ ಅದನ್ನು ಸದುಪಯೋಗ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಮೊದಲ ಕ್ವಾರ್ಟರ್‌ನ ಕೊನೆಯ ಕ್ಷಣಗಳಲ್ಲಿ ನ್ಯೂಜಿಲೆಂಡ್‌ನ ರಕ್ಷಣಾ ವಿಭಾಗದವರು ಮಾಡಿದ ಲೋಪವು ಭಾರತಕ್ಕೆ ಅತ್ಯುತ್ತಮ ಅವಕಾಶ ಗಳಿಸಿಕೊಟ್ಟಿತು. ಲಾಲ್‌ರಿಂಡ್ಕಿನಿ ಚೆಂಡನ್ನು ಗುರಿ ಮುಟ್ಟಿಸಿದರು.

ADVERTISEMENT

ನ್ಯೂಜಿಲೆಂಡ್‌ಗೂ ಒಲಿದ ಅವಕಾಶ:ಎರಡನೇ ಕ್ವಾರ್ಟರ್‌ನ ಆರಂಭದಲ್ಲಿ ನ್ಯೂಜಿಲೆಂಡ್‌ಗೂಪೆನಾಲ್ಟಿ ಕಾರ್ನರ್‌ ಅವಕಾಶ ಒಲಿಯಿತು. ಆದರೆ ಆ ತಂಡದ ದಾಳಿಯನ್ನು ತಡೆಯುವಲ್ಲಿ ಭಾರತದ ಗೋಲ್‌ ಕೀಪರ್ ಬಿಚ್ಚು ದೇವಿ ಖಾರಿಬಂ ಯಶಸ್ವಿಯಾದರು.

ವಿರಾಮಕ್ಕೆ ತೆರಳುವ ಕೆಲವು ನಿಮಿಷಗಳ ಮೊದಲು ಉಭಯ ತಂಡಗಳು ಚೆಂಡಿನ ಮೇಲೆ ಹಿಡಿತ ಸಾಧಿಸಲು ಭಾರಿ ಪೈಪೋಟಿ ನಡೆಸಿದವು. ಮೂರನೇ ಕ್ವಾರ್ಟರ್‌ನಲ್ಲೂ ಇದು ಮುಂದುವರಿಯಿತು. ಹೀಗಾಗಿ ಪಂದ್ಯ ರೋಚಕವಾಯಿತು. ಭಾರತಕ್ಕೆ ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳು ಲಭಿಸಿದವು. ಆದರೆ ಗೋಲ್ ಕೀಪರ್ ಕೆಲಿ ಕಾರ್ಲಿನ್ ಭಾರತದ ಆಸೆಗೆ ತಣ್ಣೀರು ಸುರಿದರು. ಈ ಕ್ವಾರ್ಟರ್‌ನ ಕೊನೆಯಲ್ಲಿ ನ್ಯೂಜಿಲೆಂಡ್‌ಗೂ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತು. ಆದರೆ ಭಾರತದ ರಕ್ಷಣಾ ವಿಭಾಗದವರು ಮೇಲುಗೈ ಸಾಧಿಸಿದರು.

ಕೊನೆಯ ಕ್ವಾರ್ಟರ್‌ನಲ್ಲೂ ಜಿದ್ದಾಜಿದ್ದಿಯ ಹೋರಾಟ ಕಂಡುಬಂತು. ಪಂದ್ಯ ಮುಕ್ತಾಯಕ್ಕೆ 30 ಸೆಕೆಂಡು ಬಾಕಿ ಇದ್ದಾಗ ಭಾರತಕ್ಕೆ ಪೆನಾಲ್ಟಿ ಕಾರ್ನರ್ ದೊರಕಿತು. ಪ್ರಭುಲೀನ್ ಚೆಂಡನ್ನು ಗುರಿ ಸೇರಿಸಿದರು. ಭಾರತದ ಮುಂದಿನ ಪಂದ್ಯ ಗುರುವಾರ ಆಸ್ಟ್ರೇಲಿಯಾ ವಿರುದ್ಧ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.