ADVERTISEMENT

ಏಷ್ಯನ್ ಆರ್ಚರಿ ಚಾಂಪಿಯನ್‌ಷಿಪ್‌: ಭಾರತ ಆರ್ಚರಿಪಟುಗಳ ಕೈತಪ್ಪಿದ ಚಿನ್ನ

ಏಳು ಪದಕಗಳೊಂದಿಗೆ ಅಭಿಯಾನ ಮುಕ್ತಾಯ

ಪಿಟಿಐ
Published 19 ನವೆಂಬರ್ 2021, 12:29 IST
Last Updated 19 ನವೆಂಬರ್ 2021, 12:29 IST
ಪ್ರವೀಣ್ ಜಾಧವ್‌– ಪಿಟಿಐ ಚಿತ್ರ
ಪ್ರವೀಣ್ ಜಾಧವ್‌– ಪಿಟಿಐ ಚಿತ್ರ   

ಢಾಕಾ: ಭಾರತದ ರಿಕರ್ವ್ ವಿಭಾಗದ ಆರ್ಚರಿಪಟುಗಳು ಕೊರಿಯಾದ ಸವಾಲು ಮೀರುವಲ್ಲಿ ಮತ್ತೊಮ್ಮೆ ವಿಫಲರಾದರು. ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ದೇಶದ ಬಿಲ್ಗಾರರು ಪುರುಷರ ಮತ್ತು ತಂಡ ವಿಭಾಗಗಳಲ್ಲಿ ಎರಡು ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡರು.

ಚಾಂಪಿಯನ್‌ಷಿಪ್‌ನಲ್ಲಿ ತಂಡವು ಏಳು ಪದಕಗಳೊಂದಿಗೆ ಅಭಿಯಾನ ಮುಕ್ತಾಯಗೊಳಿಸಿತು. ರಿಕರ್ವ್‌ ಮಿಶ್ರ ತಂಡ ವಿಭಾಗದಲ್ಲಿ 6–0ಯಿಂದ ಉಜ್ಬೆಕಿಸ್ತಾನ ತಂಡವನ್ನು ಮಣಿಸಿದ ಭಾರತ ತಂಡದವರು ಕಂಚಿನ ಪದಕವನ್ನೂ ಗೆದ್ದರು. ಈ ತಂಡದಲ್ಲಿ ಅಂಕಿತಾ ಭಕತ್‌ ಮತ್ತು ಕಪಿಲ್ ಇದ್ದರು. ಒಟ್ಟು ಒಂದು ಚಿನ್ನ, ನಾಲ್ಕು ಬೆಳ್ಳಿ ಹಾಗೂ ಎರಡೂ ಕಂಚಿನ ಪದಕಗಳು ಭಾರತಕ್ಕೆ ಒಲಿದವು.

ಬಾಂಗ್ಲಾದೇಶ ಆರ್ಮಿ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯಲ್ಲಿ ಕಪಿಲ್, ಪ್ರವೀಣ್ ಜಾಧವ್‌ ಹಾಗೂ ಪಾರ್ಥ್ ಸಾಳುಂಕೆ ಅವರಿದ್ದ ಭಾರತದ ಪುರುಷರ ರಿಕರ್ವ್‌ ತಂಡವು ಚಿನ್ನದ ಪದಕದ ಸುತ್ತಿನಲ್ಲಿ 2–6ರಿಂದ ಅಗ್ರಶ್ರೇಯಾಂಕದ ಕೊರಿಯಾ ಆಟಗಾರರಾದ ಲೀ ಸೆಯುಂಗ್‌ಯುನ್‌, ಕಿಮ್ ಪಿಲ್–ಜೂಂಗ್‌ ಮತ್ತು ಹಾನ್‌ ವೂ ಟ್ಯಾಕ್ ಎದುರು ಮಣಿದರು.

ADVERTISEMENT

ಮಹಿಳಾ ರಿಕರ್ವ್ ತಂಡದಲ್ಲಿದ್ದ ಅಂಕಿತಾ ಭಕತ್‌, ಮಧು ವೇದ್ವಾನ್ ಹಾಗೂ ರಿಧಿ ಅವರು ಫೈನಲ್‌ನಲ್ಲಿ 0–6ರಿಂದ ರಿಯೂ ಸು ಜಂಗ್‌, ಒಹ್‌ ಯೆಜಿನ್‌ ಮತ್ತು ಲಿಮ್ ಹೆಜಿನ್ ಎದುರು ನಿರಾಸೆ ಅನುಭವಿಸಿದರು.

ಈ ಹಿಂದಿನ ಆವೃತ್ತಿಯಲ್ಲೂ ಭಾರತ ಏಳು ಪದಕಗಳನ್ನು (ಒಂದು ಚಿನ್ನ, ಎರಡು ಬೆಳ್ಳಿ ಮತ್ತು ನಾಲ್ಕು ಕಂಚು) ಗೆದ್ದುಕೊಂಡಿತ್ತು. ಆದರೆ ತಂಡವು ಈ ಬಾರಿ ಗೆದ್ದ ಬೆಳ್ಳಿ ಪದಕಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

ಕೊರಿಯಾ ಎದುರು ಎಡವುವ ಭಾರತದ ಆರ್ಚರಿಪಟುಗಳ ಚಾಳಿ ಇಲ್ಲಿಯೂ ಮುಂದುವರಿಯಿತು. 2013ರಲ್ಲಿ ರಿಕರ್ವ್ ಸ್ಪರ್ಧೆಯ ಮಿಶ್ರ ತಂಡ ವಿಭಾಗದಲ್ಲಿ ಜಯಂತ್ ತಾಲೂಕ್ದಾರ್ ಹಾಗೂ ದೀಪಿಕಾ ಕುಮಾರಿ ಚಿನ್ನ ಗೆದ್ದಿದ್ದರು. ಅದಾದ ಬಳಿಕ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಭಾರತದ ಮುಡಿಗೆ ಸೇರಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.