ಎಸ್ಸೆನ್ (ಜರ್ಮನಿ): ಆರ್ಚರಿಪಟುಗಳಾದ ಪರ್ನೀತ್ ಕೌರ್ ಮತ್ತು ಕುಶಾಲ್ ದಲಾಲ್ ಅವರನ್ನು ಒಳಗೊಂಡ ಭಾರತದ ಮಿಶ್ರ ಕಾಂಪೌಂಡ್ ತಂಡವು ಇಲ್ಲಿ ನಡೆದ ವಿಶ್ವ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಚಿನ್ನದ ಸಾಧನೆ ಮಾಡಿತು.
ಭಾರತದ ಜೋಡಿಯು ಚಿನ್ನದ ಪದಕ ಸುತ್ತಿನಲ್ಲಿ 157-154ರಿಂದ ದಕ್ಷಿಣ ಕೊರಿಯಾದ ಯೆರಿನ್ ಪಾರ್ಕ್ ಮತ್ತು ಸೆಯುಂಗ್‌ಹ್ಯುನ್ ಪಾರ್ಕ್ ಅವರನ್ನು ಮಣಿಸಿತು.
ಕೂಟದಲ್ಲಿ ಇದು ಭಾರತಕ್ಕೆ ದೊರೆತ ಮೊದಲ ಚಿನ್ನವಾಗಿದೆ. ಆರ್ಚರಿಯಲ್ಲಿ ದಕ್ಕಿದ ಮೂರನೇ ಪದಕ ಇದಾಗಿದೆ. ಈ ಮೂಲಕ ಭಾರತದ ಪದಕಗಳ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಅಮೆರಿಕ (74) ಮತ್ತು ಚೀನಾ (49) ಪದಕ ಪಟ್ಟಿಯಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿವೆ.
ಇದಕ್ಕೂ ಮುನ್ನ ದಲಾಲ್, ಸಾಹಿಲ್ ಜಾಧವ್ ಮತ್ತು ಹೃತಿಕ್ ಶರ್ಮಾ ಅವರನ್ನು ಒಳಗೊಂಡ ಪುರುಷರ ತಂಡವು ರೋಚಕ ಫೈನಲ್‌ನಲ್ಲಿ ಟರ್ಕಿಯ ತಂಡಕ್ಕೆ ಮಣಿದು, ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿತು. ಮೊದಲೆರಡು ಸುತ್ತಿನಲ್ಲಿ ಮುನ್ನಡೆ ಸಾಧಿಸಿದ್ದ ಭಾರತ ತಂಡವು ನಾಲ್ಕು ಸುತ್ತಿನ ಅಂತ್ಯಕ್ಕೆ ಕೇವಲ 1 ಅಂಕದಿಂದ (231–232) ಸೋತಿತು.
ಪರ್ನೀತ್, ಅವನೀತ್ ಕೌರ್ ಮತ್ತು ಮಧುರಾ ಧಮನ್ ಗಾಂವ್ಕರ್ ಅವರನ್ನು ಒಳಗೊಂಡ ಮಹಿಳೆಯರ ತಂಡವು 232-224ರಿಂದ ಬ್ರಿಟನ್ ತಂಡವನ್ನು ಮಣಿಸಿ ಕಂಚಿನ ಪದಕ ಗೆದ್ದುಕೊಂಡಿತು.
ಶನಿವಾರ ನಡೆಯಲಿರುವ ಪುರುಷರ ವೈಯಕ್ತಿಕ ಸೆಮಿಫೈನಲ್‌ನಲ್ಲಿ ದಲಾಲ್ ಮತ್ತು ಜಾಧವ್ ಮುಖಾಮುಖಿಯಾಗಲಿದ್ದಾರೆ. ಮಹಿಳೆಯರ ವಿಭಾಗದ ಸೆಮಿಫೈನಲ್‌ನಲ್ಲಿ ಪರ್ನೀತ್ ಅವರು ದಕ್ಷಿಣ ಕೊರಿಯಾದ ಎಸ್. ಕಿಮ್ ಅವರನ್ನು ಎದುರಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.