ನೀರಜ್ ಚೋಪ್ರಾ
ಪಿಟಿಐ ಚಿತ್ರ
ನವದೆಹಲಿ: ದಕ್ಷಿಣ ಕೊರಿಯಾದ ಗುಮಿ ನಗರದಲ್ಲಿ ಮೇ 27 ರಿಂದ ನಡೆಯಲಿರುವ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ಗೆ 59 ಸದಸ್ಯರ ಭಾರತ ತಂಡವನ್ನು ಶುಕ್ರವಾರ ಪ್ರಕಟಿಸಲಾಗಿದೆ. ನಿರೀಕ್ಷೆಯಂತೆ ನೀರಜ್ ಚೋಪ್ರಾ ಈ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುತ್ತಿಲ್ಲ.
ಕೊಚ್ಚಿಯಲ್ಲಿ ಗುರುವಾರ ಮುಕ್ತಾಯಗೊಂಡ ನಾಲ್ಕು ದಿನಗಳ ಫೆಡರೇಷನ್ ಕಪ್ ಅಥ್ಲೆಟಿಕ್ಸ್‌ನಲ್ಲಿ ಉತ್ತಮ ಸಾಧನೆ ತೋರಿದವರು ನಿರೀಕ್ಷೆಯಂತೆ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಈ ವರ್ಷ ಡೈಮಂಡ್ ಲೀಗ್ ಕೂಟಗಳಲ್ಲಿ ಭಾಗಹಿಸುವುದಕ್ಕೆ ಮತ್ತು ಜಪಾನ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್‌ಗೆ ಹೆಚ್ಚಿನ ಗಮನ ನೀಡುತ್ತಿರುವ ಕಾರಣ ನೀರಜ್ ಚೋಪ್ರಾ ಏಷ್ಯನ್ ಕೂಟ ತಪ್ಪಿಸಿಕೊಳ್ಳುವುದು ನಿರೀಕ್ಷಿತವೇ ಆಗಿತ್ತು. ಜೊತೆಗೆ ಅವರು ಬೆಂಗಳೂರಿನಲ್ಲಿ ಮೇ 24ರಂದು ನಡೆಯಲಿರುವ ಎನ್‌ಸಿ ಕ್ಲಾಸಿಕ್ ಜಾವೆಲಿನ್ ಸ್ಪರ್ಧೆಗೆ ತಯಾರಿಯಲ್ಲೂ ತೊಡಗಿದ್ದಾರೆ.
ಷಾಟ್‌ಪಟ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ತಜಿಂದರ್ ಪಾಲ್ ತೂರ್ ಅವರು ಫೆಡರೇಷನ್ ಕಪ್ ಕೂಟದಲ್ಲಿ ಎರಡನೇ ಸ್ಥಾನ ಪಡೆದ ಕಾರಣ ಅವರನ್ನು ಕೈಬಿಡಲಾಗಿದೆ.
ಪೋಲ್‌ವಾಲ್ಟರ್ ದೇವ್ ಕುಮಾರ್ ಮೀನಾ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ್ದರೂ, ಅವರಿಗೆ ಏಷ್ಯನ್ ಕೂಟದ ಟಿಕೆಟ್ ಕೈತಪ್ಪಿದೆ. ಅವರು ಅರ್ಹತಾ ಮಟ್ಟ ತಲುಪಲಾಗಿರಲಿಲ್ಲ.
ಫೆಡರೇಷನ್ ಕಪ್‌ನಲ್ಲಿ ಗೈರುಹಾಜರಾಗಿದ್ದರೂ, ಅವಿನಾಶ್ ಸಾಬ್ಳೆ (3000 ಮೀ. ಸ್ಟೀಪಲ್‌ಚೇಸ್), ಪಾರುಲ್ ಚೌಧರಿ (ಮಹಿಳೆಯರ 3000 ಮೀ. ಸ್ಟೀಪಲ್‌ಚೇಸ್) ಮತ್ತು ಗುಲ್ವೀರ್ ಸಿಂಗ್ (5000 ಮತ್ತು 10000 ಮೀ. ಓಟ) ಅವರು ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಎಎಫ್‌ಐ ಅನುಮತಿ ಪಡೆದು ಅವರು ಹೊರದೇಶಗಳಲ್ಲಿ ತರಬೇತಿ, ಸ್ಪರ್ಧೆಗಳಲ್ಲಿ ತೊಡಗಿದ್ದಾರೆ.
ಕರ್ನಾಟಕದ ಮಣಿಕಂಠ ಹೋಬಳಿದಾರ್ 4x100 ಮೀ. ರಿಲೇ ತಂಡದಲ್ಲಿ ಓಡಲಿದ್ದಾರೆ. ಮಹಿಳಾ ತಂಡದಲ್ಲಿ ಎಸ್.ಎಸ್.ಸ್ನೇಹಾ, ದಾನೇಶ್ವರಿ ಎ.ಟಿ., ಮತ್ತು ವಿ.ಸುಧೀಕ್ಷಾ ಸ್ಥಾನ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.