ADVERTISEMENT

ಅಶ್ವಿನಿ–ಸಿಕ್ಕಿ ಶುಭಾರಂಭ

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಅರ್ಹತಾ ಹಂತದಲ್ಲಿ ಆತಿಥೇಯರ ಪ್ರಾಬಲ್ಯ

ಪಿಟಿಐ
Published 26 ಮಾರ್ಚ್ 2019, 16:37 IST
Last Updated 26 ಮಾರ್ಚ್ 2019, 16:37 IST
ಅಶ್ವಿನಿ ‍ಪೊನ್ನಪ್ಪ (ಎಡ) ಮತ್ತು ಎನ್‌.ಸಿಕ್ಕಿ ರೆಡ್ಡಿ
ಅಶ್ವಿನಿ ‍ಪೊನ್ನಪ್ಪ (ಎಡ) ಮತ್ತು ಎನ್‌.ಸಿಕ್ಕಿ ರೆಡ್ಡಿ   

ನವದೆಹಲಿ: ದಿಟ್ಟ ಆಟ ಆಡಿದ ಭಾರತದ ಅಶ್ವಿನಿ ‍‍ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ ಅವರು ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಕೆ.ಡಿ.ಜಾಧವ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಮಹಿಳಾ ಡಬಲ್ಸ್‌ ವಿಭಾಗದ ಹಣಾಹಣಿಯಲ್ಲಿ ಕರ್ನಾಟಕದ ಅಶ್ವಿನಿ ಮತ್ತು ಹೈದರಾಬಾದ್‌ನ ಸಿಕ್ಕಿ 22–20, 21–19ರಲ್ಲಿ ಚೀನಾದ ಲೀ ವೆನ್‌ಮೀ ಮತ್ತು ಜೆಂಗ್‌ ಯೂ ಎದುರು ವಿಜಯಿಯಾದರು. ಈ ಹೋರಾಟ 47 ನಿಮಿಷ ನಡೆಯಿತು.

ಪುರುಷರ ಡಬಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಹೋರಾಟದಲ್ಲಿ ಅನಿರುದ್ಧ್‌ ಮಯೇಕರ್‌ ಮತ್ತು ವಿನಯ್‌ ಕುಮಾರ್‌ ಸಿಂಗ್‌ 21–15, 14–21, 21–13ರಲ್ಲಿ ಇಶಾನ್‌ ಕುನ್ವರ್‌ ಮತ್ತು ಚಂದ್ರಭೂಷಣ್‌ ತ್ರಿಪಾಠಿ ಅವರನ್ನು ಮಣಿಸಿದರು.

ADVERTISEMENT

ಕೇತನ್ ಚಾಹಲ್‌ ಮತ್ತು ಸತೀಂದರ್‌ ಮಲಿಕ್‌ 14–21, 14–21ರಲ್ಲಿ ಒವು ಕ್ಸುವಾನ್ಯಿ ಮತ್ತು ರೆನ್‌ ಕ್ಸಿಯಾಂಗ್ಯು ಎದುರು ಸೋತರು.

ಅರ್ಹತಾ ಸುತ್ತಿನಲ್ಲಿ ಆತಿಥೇಯ ಸ್ಪರ್ಧಿಗಳು ಪ್ರಾಬಲ್ಯ ಮೆರೆದರು. ಸಿಂಗಲ್ಸ್‌ ವಿಭಾಗದಲ್ಲಿ ಎಂಟು ಮಂದಿ ಮತ್ತು ಡಬಲ್ಸ್‌ ವಿಭಾಗದ ಹತ್ತು ಜೋಡಿ ಮುಖ್ಯ ಸುತ್ತಿಗೆ ಲಗ್ಗೆ ಇಟ್ಟಿತು.

ಪುರುಷರ ಸಿಂಗಲ್ಸ್‌ನಲ್ಲಿ ರಾಹುಲ್‌ ಯಾದವ್‌ ಚಿತ್ತಾಬೋಯಿನಾ, ಸಿದ್ದಾರ್ಥ್‌ ಠಾಕೂರ್‌, ಕಾರ್ತಿಕ್‌ ಜಿಂದಾಲ್‌ ಮತ್ತು ಕಾರ್ತಿಕೇಯ ಗುಲ್ಶನ್‌ ಕುಮಾರ್‌ ಪ್ರಧಾನ ಹಂತಕ್ಕೇರಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 257ನೇ ಸ್ಥಾನದಲ್ಲಿರುವ ಕಾರ್ತಿಕ್‌ ಜಿಂದಾಲ್‌ ಮೊದಲ ಸುತ್ತಿನಲ್ಲಿ ಪವೆಲ್‌ ಕೊಟ್ಸಾರೆಂಕೊ ಎದುರು ಗೆದ್ದರು.

ಎರಡನೇ ಸುತ್ತಿನಲ್ಲಿ ಜಿಂದಾಲ್‌ 21–12, 21–23, 21–19ರಲ್ಲಿ ಶರತ್‌ ದುನ್ನಾ ಅವರನ್ನು ಪರಾಭವಗೊಳಿಸಿದರು. ರಾಹುಲ್‌ ಯಾದವ್‌ 21–14, 21–15ರಲ್ಲಿ ಅನಂತ ಶಿವಂ ಜಿಂದಾಲ್‌ ವಿರುದ್ಧ ವಿಜಯಿಯಾದರು.

ಸಿದ್ದಾರ್ಥ್‌ ಠಾಕೂರ್‌ 21–11, 21–12ರಲ್ಲಿ ಅನೀತ್ ಕುಮಾರ್‌ ಹಾಗೂ 21–6, 21–13ರಲ್ಲಿ ಗುರುಪ್ರತಾಪ್‌ ಸಿಂಗ್‌ ಧಲಿವಾಲ್‌ ಅವರನ್ನು ಮಣಿಸಿದರು.

ಗುಲ್ಶನ್‌ ಕುಮಾರ್‌ 21–7, 21–5ರಲ್ಲಿ ಸತೀಂದರ್‌ ಮಲಿಕ್‌ ಹಾಗೂ 21–16, 21–13ರಲ್ಲಿ ಸಿದ್ದಾರ್ಥ್‌ ಅವರನ್ನು ಸೋಲಿಸಿದರು. ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ರಿತಿಕಾ ಥಾಕರ್‌, ಪ್ರಾಶಿ ಜೋಶಿ, ರಿಯಾ ಮುಖರ್ಜಿ ಮತ್ತು ವೈದೇಹಿ ಚೌಧರಿ ಮುಖ್ಯ ಸುತ್ತು ಪ್ರವೇಶಿಸಿದರು.

ರಿತಿಕಾ 21–6, 21–6ರಲ್ಲಿ ಹೇನಿ ದೋಹಾ ಎದುರು ಗೆದ್ದರು. ಪ್ರಾಶಿ 21–14, 21–17ರಲ್ಲಿ ಶ್ರುತಿ ಮುಂಡಾದ ಅವರನ್ನು ಪರಾಭವಗೊಳಿಸಿದರು. ವೈದೇಹಿ ಮತ್ತು ರಿಯಾ ಅವರಿಗೆ ‘ವಾಕ್‌ ಓವರ್‌’ ಲಭಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.