
ನವದೆಹಲಿ: ಭಾರತದ ಪ್ರಮುಖ ಶಟ್ಲರ್‌ಗಳಾದ ಪಿ.ವಿ.ಸಿಂಧು ಮತ್ತು ಲಕ್ಷ್ಯ ಸೇನ್ ಅವರು ಮಂಗಳವಾರ ತವರಿನಲ್ಲಿ ಆರಂಭವಾಗುವ ‘ಇಂಡಿಯಾ ಓಪನ್ ಸೂಪರ್ 750’ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸುಧಾರಿತ ಆಟದ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.
ಆದರೆ ಇತ್ತೀಚಿನ ಕೆಲ ವರ್ಷದಿಂದ ಭಾರತದ ಪ್ರಮುಖ ಆಟಗಾರರು ತವರಿನ ಪ್ರಯೋಜನ ಪಡೆಯುವಲ್ಲಿ ಯಶಸ್ವಿಯಾಗುತ್ತಿಲ್ಲ. ಹಿಂದಿನ 15 ವರ್ಷಗಳಲ್ಲಿ ಬೆರಳೆಣಿಕೆಯಷ್ಟು ಆಟಗಾರರು ಟೂರ್ನಿಯಲ್ಲಿ ಯಶಸ್ಸು ಗಳಿಸಿದ್ದಾರೆ.
ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಭಾರತದ ಅಗ್ರ ಆಟಗಾರ ಲಕ್ಷ್ಯ ಸೇನ್ ಅವರು ಸ್ವದೇಶದ ಆಟಗಾರ ಆಯುಷ್ ಶೆಟ್ಟಿ ಅವರನ್ನು ಎದುರಿಸಲಿದ್ದಾರೆ. ಸಿಂಧು, ವಿಯೆಟ್ನಾಮಿನ ನೂಯೆನ್ ಥುಯ್ ಲಿನ್ ಅವರನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದ್ದಾರೆ.
2017ರ ಚಾಂಪಿಯನ್ ಆಗಿರುವ ಸಿಂಧು, ಕಳೆದ ವಾರ ಮಲೇಷ್ಯಾ ಓಪನ್ ಸೂಪರ್ 1000 ಟೂರ್ನಿಯ ಸೆಮಿಫೈನಲ್ ತಲುಪಿದ್ದು, ವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ. ಗಾಯಾಳಾಗಿ ಕೆಲವು ತಿಂಗಳು ಆಟದಿಂದ ದೂರವಿದ್ದ ಸಿಂಧು, ಆ ಟೂರ್ನಿ ಮೂಲಕ ಪುನರಾಗಮನ ಮಾಡಿದ್ದರು.
ಈ ಟೂರ್ನಿಯು ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಸಿಂಧು ಅವರಿಗೆ ಲಯಕ್ಕೆ ಮರಳಲು ವೇದಿಕೆಯಾಗಿದೆ.
2022ರಲ್ಲಿ ಇಂಡಿಯಾ ಓಪನ್ ಚಾಂಪಿಯನ್ ಆಗಿದ್ದ ಸೇನ್, 2025ರ ಕೊನೆಯಲ್ಲಿ ಆಸ್ಟ್ರೇಲಿಯನ್ ಓಪನ್ ಸೂಪರ್ 500 ಟೂರ್ನಿ ಗೆದ್ದರೂ, ಈ ವರ್ಷ ಮಲೇಷ್ಯಾ ಓಪನ್‌ನಲ್ಲಿ ನಿರಾಸೆ ಅನುಭವಿಸಿದ್ದಾರೆ. ಅವರಿಗೂ ಸ್ಥಿರ ಆಟ ಕಂಡುಕೊಳ್ಳಲು ತವರಿನ ಟೂರ್ನಿ ಅವಕಾಶ ಮಾಡಿದೆ.
2025ರಲ್ಲಿ ಅಮೆರಿಕ ಓಪನ್ ಸೂಪರ್ 300 ಟೂರ್ನಿ ಗೆದ್ದಿದ್ದ ಆಯುಷ್, ನಂತರ ವಿವಿಧ ಟೂರ್ನಿಗಳಲ್ಲಿ ಕೊಡೈ ನರವೋಕಾ, ಲೋಹ್ ಕೀನ್ ಯು, ಚೌ ಟಿಯೆನ್ ಚೆನ್, ಬ್ರಿಯಾನ್ ಯಂಗ್ ಅಂಥ ಖ್ಯಾತನಾಮರನ್ನು ಮಣಿಸಿದ್ದಾರೆ. ಒಲಿಂಪಿಕ್ ಕಂಚಿನ ಪದಕ ವಿಜೇತರಾದ ಝಿ ಜಿಯಾ ಅವರನ್ನು ಇತ್ತೀಚೆಗೆ ಮಲೇಷ್ಯಾ ಓಪನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಮಣಿಸಿದ್ದಾರೆ.
ಕಿದಂಬಿ ಶ್ರೀಕಾಂತ್ ಮೊದಲ ಸುತ್ತಿನಲ್ಲಿ ತೈವಾನ್‌ನ ಲಿನ್ ಚುನ್–ಯಿ ಅವರನ್ನು ಎದುರಿಸಲಿದ್ದಾರೆ.
ಮಹಿಳಾ ಸಿಂಗಲ್ಸ್‌ನಲ್ಲಿ ಸಿಂಧು ಜೊತೆಗೆ ಮಾಳವಿಕಾ ಬನ್ಸೋದ್ ಕೂಡ ಕಣದಲ್ಲಿದ್ದಾರೆ. ಮಾಳವಿಕಾ ಮೊದಲ ಸುತ್ತಿನಲ್ಲಿ ತೈವಾನ್‌ನ ಪೈ ಯು ಪೊ ವಿರುದ್ಧ ಕಣಕ್ಕಿಳಿಯಲಿದ್ದಾರೆ.
ಪದಕ ಭರವಸೆ:
ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಜೋಡಿ ಭಾರತದ ಪದಕ ಭರವಸೆಯಾಗಿದ್ದಾರೆ. ಈ ಹಿಂದಿನ ನಾಲ್ಕು ವರ್ಷಗಳಲ್ಲಿ ಎರಡು ಬಾರಿ ಫೈನಲ್ ತಲುಪಿರುವ ಈ ಅನುಭವಿ ಜೋಡಿ 2022ರಲ್ಲಿ ಚಾಂಪಿಯನ್ ಆಗಿತ್ತು.
ಭಾರತದ ಈ ಜೋಡಿ 2025ರಲ್ಲಿ ಹಾಂಗ್‌ಕಾಂಗ್ ಓಪನ್ ಮತ್ತು ಚೀನಾ ಮಾಸ್ಟರ್ಸ್‌ನಲ್ಲಿ ರನ್ನರ್ ಅಪ್ ಆಗಿದ್ದು, ಎರಡನೇ ಬಾರಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸಿತ್ತು. ವಿಶ್ವ ಟೂರ್ ಫೈನಲ್ಸ್‌ನಲ್ಲಿ ನಾಕೌಟ್ ಕೂಡ ತಲುಪಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.