ADVERTISEMENT

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌: ಕ್ವಾರ್ಟರ್‌ ಫೈನಲ್‌ಗೆ ಲಕ್ಷ್ಯ ಸೇನ್‌

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 15:50 IST
Last Updated 15 ಜನವರಿ 2026, 15:50 IST
ಭಾರತದ ಲಕ್ಷ್ಯ ಸೇನ್‌ ಅವರ ಆಟದ ವೈಖರಿ –ಪಿಟಿಐ ಚಿತ್ರ
ಭಾರತದ ಲಕ್ಷ್ಯ ಸೇನ್‌ ಅವರ ಆಟದ ವೈಖರಿ –ಪಿಟಿಐ ಚಿತ್ರ   

ನವದೆಹಲಿ: ಉತ್ಸಾಹಭರಿತ ಆಟ ಪ್ರದರ್ಶಿಸಿದ ಮಾಜಿ ಚಾಂಪಿಯನ್‌ ಲಕ್ಷ್ಯ ಸೇನ್‌ ಅವರು ಇಂಡಿಯಾ ಓಪನ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಜಪಾನ್‌ನ ಕೆಂಟಾ ನಿಶಿಮೊಟಾ ಅವರಿಗೆ ಆಘಾತ ನೀಡಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಅವರು ಟೂರ್ನಿಯಲ್ಲಿ ಉಳಿದಿರುವ ತವರಿನ ಏಕೈಕ ಭರವಸೆಯಾಗಿದ್ದಾರೆ. 

ಭಾರತದ ಅನುಭವಿ ಸಿಂಗಲ್ಸ್‌ ಆಟಗಾರರಾದ ಕಿದಂಬಿ ಶ್ರೀಕಾಂತ್‌ ಮತ್ತು ಎಚ್‌.ಎಸ್‌. ಪ್ರಣಯ್‌ ಅವರು ಎರಡನೇ ಸುತ್ತಿನಲ್ಲೇ ಅಭಿಯಾನ ಮುಗಿಸಿದರು. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ– ಚಿರಾಗ್‌ ಶೆಟ್ಟಿ ಜೋಡಿ, ಮಹಿಳೆಯರ ಡಬಲ್ಸ್‌ನಲ್ಲಿ ಟ್ರೀಸಾ ಜೋಳಿ– ಗಾಯತ್ರಿ ಗೋಪಿಚಂದ್ ಅವರೂ ನಿರಾಸೆ ಅನುಭವಿಸಿದರು.

ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪ್ರಿ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಸೇನ್‌ 21-19, 21-11 ನೇರ ಗೇಮ್‌ಗಳಿಂದ ನಿಶಿಮೊಟೊ ಅವರನ್ನು ಸೋಲಿಸಿದರು. ಆರಂಭದಲ್ಲಿ ಲಯಕ್ಕೆ ಪರದಾಡಿದ ಭಾರತದ ಆಟಗಾರ ಕ್ರಮೇಣ ಹಿಡಿತ ಸಾಧಿಸಿದರು.

ADVERTISEMENT

ಮೊದಲ ಗೇಮ್‌ನಲ್ಲಿ 14–18ರಿಂದ ಹಿನ್ನಡೆಯಲ್ಲಿದ್ದ ಸೇನ್‌, ಎದುರಾಳಿ ಆಟಗಾರ ಎಸಗಿದ ತಪ್ಪುಗಳ ಲಾಭ ಪಡೆದರು. ಎರಡನೇ ಗೇಮ್‌ನಲ್ಲಿ ನಿಶಿಮೊಟಾ ಬೇಗನೆ ಸೋಲೊಪ್ಪಿಕೊಂಡರು. ಎಂಟರ ಘಟ್ಟದ ಹಣಾಹಣಿಯಲ್ಲಿ 24 ವರ್ಷದ ಸೇನ್‌ ಅವರು ತೈವಾನ್‌ನ ಲಿನ್ ಚುನ್-ಯಿ ಅವರನ್ನು ಎದುರಿಸುವರು. ಚುನ್‌ 21-16, 21-17 ಅಂತರದಿಂದ ಐರ್ಲೆಂಡ್‌ನ ನಾಟ್ ನ್ಗುಯೆನ್ ಅವರನ್ನು ಸೋಲಿಸಿದರು.

ಬಿಡಬ್ಲ್ಯೂಎಫ್‌ ವಿಶ್ವ ಟೂರ್‌ ಫೈನಲ್ಸ್‌ನ ವಿಜೇತ ಫ್ರಾನ್ಸ್‌ ಕ್ರಿಸ್ಟೊ ಪೋಪೊವ್‌ 21-14, 17-21, 21-17ರಿಂದ ವಿಶ್ವ ಚಾಂಪಿಯನ್‌ಷಿಪ್‌ ಬೆಳ್ಳಿ ಪದಕ ವಿಜೇತ ಶ್ರೀಕಾಂತ್‌ ಅವರನ್ನು ಹಿಮ್ಮೆಟ್ಟಿಸಿದರು. ಸಿಂಗಪುರ ಲೋಹ್‌ ಕೀನ್‌ ಯೆವ್‌ 21-18, 19-21, 14-21ರಿಂದ ಪ್ರಣಯ್‌ ಅವರನ್ನು ಮಣಿಸಿದರು. 

ಮಾಳವಿಕಾ ಬನ್ಸೋಡ್‌ ಸೋಲುವುದರೊಂದಿಗೆ ಮಹಿಳೆಯರ ಸಿಂಗಲ್ಸ್‌ನಲ್ಲಿ ಭಾರತದ ಅಭಿಯಾನಕ್ಕೆ ತೆರೆಬಿತ್ತು. ಎರಡನೇ ಸುತ್ತಿನ ಪಂದ್ಯದಲ್ಲಿ ಮಾಳವಿಕಾ 18-21, 15-21ರಿಂದ ಐದನೇ ಶ್ರೇಯಾಂಕಿತೆ ಹ್ಯಾನ್‌ ಯುವೆ (ಚೀನಾ) ಎದುರು ಮಂಡಿಯೂರಿದರು.

ಪ್ರಶಸ್ತಿ ಗೆಲ್ಲುವ ನೆಚ್ಚಿನ ಜೋಡಿಗಳಲ್ಲಿ ಒಂದಾಗಿದ್ದ ಸಾತ್ವಿಕ್‌ ಮತ್ತು ಚಿರಾಗ್ ಅವರು ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ 27-25, 21-23, 19-21ರಲ್ಲಿ ಮೂರು ಗೇಮ್‌ಗಳ ರೋಚಕ ಹಣಾಹಣಿಯಲ್ಲಿ ಜಪಾನ್‌ನ ಹಿರೋಕಿ ಮಿಡೋರಿಕಾವಾ ಮತ್ತು ಕ್ಯೋಹೆ ಯಮಶಿತಾ ವಿರುದ್ಧ ಸೋತರು.

84 ನಿಮಿಷ ನಡೆದ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಟ್ರೀಸಾ ಮತ್ತು ಗಾಯತ್ರಿ ಜೋಡಿ 22-20, 22-24, 21-23ರಿಂದ  ಏಳನೇ ಶ್ರೇಯಾಂಕದ ಲಿ ಯಿಜಿಂಗ್ ಮತ್ತು ಲುವೊ ಕ್ಸುಮಿನ್ (ಚೀನಾ) ವಿರುದ್ಧ ಮುಗ್ಗರಿಸಿದರು. ಟೂರ್ನಿಯು ಒಟ್ಟು ₹8.58 ಕೋಟಿ ಬಹುಮಾನ ಮೊತ್ತವನ್ನು ಒಳಗೊಂಡಿದೆ.

ಭಾರತದ ಲಕ್ಷ್ಯ ಸೇನ್‌ –ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.