ADVERTISEMENT

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌: ಲಿನ್‌ಗೆ ಕಿರೀಟ

ಪ್ರಶಸ್ತಿ ಉಳಿಸಿಕೊಂಡ ಆನ್ ಸೆ–ಯಂಗ್‌

ಪಿಟಿಐ
Published 18 ಜನವರಿ 2026, 14:47 IST
Last Updated 18 ಜನವರಿ 2026, 14:47 IST
<div class="paragraphs"><p>ಪುರುಷರ ಸಿಂಗಲ್ಸ್‌ ಪ್ರಶಸ್ತಿ ಜಯಿಸಿದ ತೈವಾನ್‌ನ ಲಿನ್ ಚುನ್‌–ಯಿ&nbsp;</p></div>

ಪುರುಷರ ಸಿಂಗಲ್ಸ್‌ ಪ್ರಶಸ್ತಿ ಜಯಿಸಿದ ತೈವಾನ್‌ನ ಲಿನ್ ಚುನ್‌–ಯಿ 

   

–ಪಿಟಿಐ ಚಿತ್ರ

ನವದೆಹಲಿ: ತೈವಾನ್‌ನ ಭರವಸೆಯ ಆಟಗಾರ ಲಿನ್ ಚುನ್‌–ಯಿ ಅವರು ಭಾನುವಾರ ಮುಕ್ತಾಯಗೊಂಡ ಇಂಡಿಯಾ ಓಪನ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯ ಸಿಂಗಲ್ಸ್‌ ಕಿರೀಟ ಗೆದ್ದುಕೊಂಡರು. ವಿಶ್ವದ ಅಗ್ರಮಾನ್ಯ ಆಟಗಾರ್ತಿ, ದಕ್ಷಿಣ ಕೊರಿಯಾದ ಆನ್‌ ಸೆ–ಯಂಗ್ ಅವರು ಮಹಿಳೆಯರ ವಿಭಾಗದ ಪ್ರಶಸ್ತಿಯನ್ನು ಉಳಿಸಿಕೊಂಡರು.

ADVERTISEMENT

ವಿಶ್ವ ಕ್ರಮಾಂಕದಲ್ಲಿ 12ನೇ ಸ್ಥಾನದಲ್ಲಿರುವ ಲಿನ್‌ ಅವರು ಫೈನಲ್‌ನಲ್ಲಿ 21–10, 21–18ರಿಂದ ನೇರ ಗೇಮ್‌ಗಳಲ್ಲಿ ಮೂರನೇ ಶ್ರೇಯಾಂಕದ ಆಟಗಾರ ಜೊನಾಥನ್‌ ಕ್ರಿಸ್ಟೀ ಅವರನ್ನು ಮಣಿಸಿದರು.  ಅದರೊಂದಿಗೆ, ಸೂಪರ್‌ 750 ಮಟ್ಟದ ಟೂರ್ನಿಯಲ್ಲಿ ಮೊದಲ ಬಾರಿ ಪ್ರಶಸ್ತಿ ಜಯಿಸಿದರು.

26 ವರ್ಷ ವಯಸ್ಸಿನ ಲಿನ್‌, ಕಳೆದ ವಾರ ಮುಕ್ತಾಯಗೊಂಡ ಮಲೇಷ್ಯಾ ಓಪನ್‌ ಸೂಪರ್‌ 1000 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲಿಯೇ ನಿರ್ಗಮಿಸಿದ್ದರು.

ಅಗ್ರಶ್ರೇಯಾಂಕ ಹೊಂದಿದ್ದ ಯಂಗ್‌ ಅವರು ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ 21–13, 21–11ರಿಂದ ಚೀನಾದ ವಾಂಗ್‌ ಜಿಯಿ ಅವರನ್ನು ಮಣಿಸಿದರು. ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಯಂಗ್‌, ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ವಾಂಗ್‌ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದರು. ಈ ಇಬ್ಬರು ಆಟಗಾರ್ತಿಯರು ಒಟ್ಟು 22 ಬಾರಿ ಮುಖಾಮುಖಿಯಾಗಿದ್ದು ಯಂಗ್‌ ಅವರಿಗೆ ಇದು 18ನೇ ಗೆಲುವು.

ಮಹಿಳೆಯರ ಡಬಲ್ಸ್‌ನಲ್ಲಿ ಅಗ್ರ ಶ್ರೇಯಾಂಕಿತ ಜೋಡಿ ಲಿಯು ಶೆಂಗ್‌ಷು ಹಾಗೂ ತಾನ್‌ ನಿಂಗ್‌ ಅವರು ಚಾಂಪಿಯನ್ ಆಗಿ ಹೊರಹೊಮ್ಮಿದರು. ಚೀನಾದ ಈ ಜೋಡಿ ಫೈನಲ್‌ನಲ್ಲಿ 21–11, 21–18ರಿಂದ ಜಪಾನ್‌ನ ಯೂಕಿ ಫುಕುಶಿಮಾ ಹಾಗೂ ಸಯಾಕಾ ಮತ್ಸುಮೊಟೊ ಅವರನ್ನು ಸೋಲಿಸಿತು.

ಮಿಶ್ರ ಡಬಲ್ಸ್‌ನಲ್ಲಿ ಥಾಯ್ಲೆಂಡ್‌ನ ದೆಚಾಪೊಲ್‌ ಪೂವರನುಕ್ರೊ– ಸುಪಿಸಾರ ಪಾಸಂಪ್ರನ್‌ ಜೋಡಿಯು 19–21, 25–23, 21–18ರಿಂದ ಡೆನ್ಮಾರ್ಕ್‌ನ ಮತಿಯಾಸ್‌ ಕ್ರಿಸ್ಟಿಯಾನ್‌ಸೆನ್‌ ಹಾಗೂ ಅಲೆಕ್ಸಾಂಡ್ರಾ ಬೋಯೆ ಅವರನ್ನು ಸೋಲಿಸಿ ಪ್ರಶಸ್ತಿ ಎತ್ತಿಹಿಡಿಯಿತು.

ಪದಕದೊಂದಿಗೆ ಆನ್‌ ಸೆ–ಯಂಗ್ ಸಂಭ್ರಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.