ADVERTISEMENT

ಶ್ರೀಕಾಂತ್‌ಗೆ ನಿರಾಸೆ; ಅಕ್ಸೆಲ್ಸನ್‌ ಜಯಭೇರಿ

ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ನೀರಸ ಆಟವಾಡಿದ ಭಾರತದ ಆಟಗಾರ

ಏಜೆನ್ಸೀಸ್
Published 1 ಏಪ್ರಿಲ್ 2019, 0:25 IST
Last Updated 1 ಏಪ್ರಿಲ್ 2019, 0:25 IST
ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸನ್ ಅವರ ಆಟದ ಶೈಲಿ –ಎಎಫ್‌ಪಿ ಚಿತ್ರ
ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸನ್ ಅವರ ಆಟದ ಶೈಲಿ –ಎಎಫ್‌ಪಿ ಚಿತ್ರ   

ನವದೆಹಲಿ: ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸನ್‌ ಎದುರು ನೀರಸ ಆಟವಾಡಿದ ಭಾರತದ ಕಿದಂಬಿ ಶ್ರೀಕಾಂತ್ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ನಿರಾಸೆ ಅನುಭವಿಸಿದರು.

ಭಾನುವಾರ ಸಂಜೆ ಇಲ್ಲಿನ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅಕ್ಸೆಲ್ಸನ್‌ 21–7, 22–20ರಿಂದ ಗೆದ್ದರು. ಕೇವಲ 36 ನಿಮಿಷಗಳಲ್ಲಿ ಮುಕ್ತಾಯಗೊಂಡ ಪಂದ್ಯದ ನಂತರ ಅಕ್ಸೆಲ್ಸನ್‌ ಶರ್ಟ್ ಬಿಚ್ಚಿ ಸಂಭ್ರಮಿಸಿದರು.

ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಥಾಯ್ಲೆಂಡ್‌ನ ರಚನಾಕ್ ಇಂಟನಾನ್‌ ಚೀನಾದ ಹಿ ಬಿಂಜಾಯ್ಗೊ ಅವರನ್ನು 21–15, 21–14ರಿಂದ ಸೋಲಿಸಿ ವೃತ್ತಿ ಜೀವನದ ಮೂರನೇ ಪ್ರಶಸ್ತಿ ಗಳಿಸಿದರು.

ADVERTISEMENT

ಕಳೆದ ಬಾರಿಯ ಚಾಂಪಿಯನ್‌ ಚೀನಾದ ಶಿ ಯೂಕಿ ಅವರು ಕೊನೆಯ ಕ್ಷಣದಲ್ಲಿ ಟೂರ್ನಿಯಿಂದ ಹಿಂಜರಿದ ಕಾರಣ ಅಕ್ಸೆಲ್ಸನ್ ಅವರಿಗೆ ಅಗ್ರ ಶ್ರೇಯಾಂಕ ನೀಡಲಾಗಿತ್ತು. 17 ತಿಂಗಳ ನಂತರ ಪ್ರಮುಖ ಟೂರ್ನಿಯೊಂದರ ಫೈನಲ್ ಪ್ರವೇಶಿಸಿದ ಶ್ರೀಕಾಂತ್‌ ಮೊದಲ ಗೇಮ್‌ನಲ್ಲಿ ತೀವ್ರ ನಿರಾಸೆ ಅನುಭವಿಸಿದರು. ಎರಡನೇ ಗೇಮ್‌ನಲ್ಲಿ ಅಮೋಗ ಮುನ್ನಡೆ ಸಾಧಿಸಿ ಪಂದ್ಯದಲ್ಲಿ ಸಮಬಲ ಸಾಧಿಸುವ ಭರವಸೆ ಮೂಡಿಸಿದ್ದರು.

ಸ್ಕೋರ್‌ 18–20 ಆಗಿದ್ದಾಗ ಪಾಯಿಂಟ್‌ಗಳನ್ನು ಉಳಿಸಲು ಶ್ರೀಕಾಂತ್‌ ಭಾರಿ ಪ್ರಯತ್ನ ನಡೆಸಿದರು. ಆದರೆ ಡೆನ್ಮಾರ್ಕ್ ಆಟಗಾರ ತಿರುಗೇಟು ನೀಡಿದರು. ಎರಡು ಗೇಮ್ ಪಾಯಿಂಟ್‌ಗಳನ್ನು ಕಬಳಿಸಿ ಗೆಲುವಿನ ಕೇಕೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.