ADVERTISEMENT

ಬಾಕ್ಸಿಂಗ್‌: ಎರಡನೇ ಸುತ್ತಿಗೆ ಲೊವ್ಲಿನಾ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2018, 14:25 IST
Last Updated 11 ಸೆಪ್ಟೆಂಬರ್ 2018, 14:25 IST

ನವದೆಹಲಿ (ಪಿಟಿಐ): ಭಾರತದ ಬಾಕ್ಸರ್‌ಗಳಾದ ಲೊವ್ಲಿನಾ ಬೊರ್ಗೊಹೇನ್‌ ಹಾಗೂ ರಿತು ಗ್ರೇವಾಲ್‌ ಅವರು ಪೊಲೆಂಡ್‌ನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಸಿಲೆಸಿಯನ್‌ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದ್ದಾರೆ.

ಸೋಮವಾರ ತಡರಾತ್ರಿ ನಡೆದ 69 ಕೆ. ಜಿ. ವಿಭಾಗದ ಮೊದಲ ಪಂದ್ಯದಲ್ಲಿ ಬೊರ್ಗೊಹೇನ್‌ ಅವರು 4–1ರಿಂದ ರಷ್ಯಾದ ಎಲ್ಮಿರಾ ಅಜಿಜೊವಾ ಅವರನ್ನು ಮಣಿಸಿದರು. ಎರಡನೇ ಸುತ್ತಿನಲ್ಲಿ ಅವರು ಜೆಕ್‌ ರಿಪಬ್ಲಿಕ್‌ನ ಮಾರ್ಟಿನಾ ಶ್ಮೊರಾಂಜೋವಾ ಅವರನ್ನು ಎದುರಿಸಲಿದ್ದಾರೆ.

ಲೊವ್ಲಿನಾ, ಇಂಡಿಯಾ ಓಪನ್‌ ಹಾಗೂ ಉಲನ್‌ಬಾತರ್‌ ಕಪ್‌ನಲ್ಲಿ ಕ್ರಮವಾಗಿ ಚಿನ್ನ ಹಾಗೂ ಕಂಚಿನ ಪದಕಗಳ ಸಾಧನೆ ಮಾಡಿದ್ದರು.

ADVERTISEMENT

51 ಕೆ. ಜಿ. ವಿಭಾಗದಲ್ಲಿ ರಿತು, 5–0ಯಿಂದ ಸ್ಥಳೀಯ ಅಸಾನೊವಿಚ್‌ ರೊಜಾ ಅವರನ್ನು ಸೋಲಿಸಿದರು. ಮುಂದಿನ ಸುತ್ತಿನಲ್ಲಿ ಅವರು ರಷ್ಯಾದ ಸ್ವೆಟ್ಲಾನಾ ಸೊಲುಯಿನೊವ ಅವರೊಂದಿಗೆ ಮುಖಾಮುಖಿಯಾಗಲಿದ್ದಾರೆ.

ಭಾರತದ ಇತರ ಬಾಕ್ಸರ್‌ಗಳಾದ ಮೇರಿ ಕೊಮ್‌ (48 ಕೆ. ಜಿ. ವಿಭಾಗ), ಎಲ್‌. ಸರಿತಾ ದೇವಿ (60 ಕೆ. ಜಿ. ವಿಭಾಗ), ಶಶಿ ಚೋಪ್ರಾ (57 ಕೆ. ಜಿ. ವಿಭಾಗ) ಹಾಗೂ ಮನೀಶಾ (54 ಕೆ. ಜಿ. ವಿಭಾಗ) ಅವರೂ ಈ ಟೂರ್ನಿಯಲ್ಲಿ ಸ್ಪರ್ಧಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.