ಕ್ವಿಂಗ್‌ದಾವೊ (ಚೀನಾ): ಭಾರತ ತಂಡವು, ಬ್ಯಾಡ್ಮಿಂಟನ್ ಏಷ್ಯಾ ಮಿಶ್ರ ತಂಡ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಆರಂಭ ಮಾಡಿತು. ಬುಧವಾರ ನಡೆದ ‘ಡಿ’ ಗುಂಪಿನ ಪಂದ್ಯದಲ್ಲಿ ಮಕಾವು ತಂಡವನ್ನು 5–0 ಯಿಂದ ಸೋಲಿಸಿತು.
ದುಬೈನಲ್ಲಿ ನಡೆದಿದ್ದ ಈ ಹಿಂದಿನ ಆವೃತ್ತಿಯಲ್ಲಿ ಕಂಚಿನ ಪದಕ ಜಯಿಸಿದ್ದ ಭಾರತ ಬುಧವಾರದ ಗೆಲುವಿನೊಡನೆ ಕ್ವಾರ್ಟರ್‌ಫೈನಲ್ ಪ್ರವೇಶ ಖಚಿತಪಡಿಸಿಕೊಂಡಿತು.
ಭಾರತ ತಂಡ ಗುರುವಾರ ನಡೆಯುವ ಗುಂಪಿನ ಎರಡನೇ ಹಾಗೂ ಅಂತಿಮ ಪಂದ್ಯದಲ್ಲಿ ದಕ್ಷಿಣ ಕೊರಿಯಾ ತಂಡವನ್ನು ಎದುರಿಸಲಿದ್ದು ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡದ ನಿರ್ಧಾರ ಆಗಲಿದೆ.
ರಾಷ್ಟ್ರೀಯ ಕ್ರೀಡೆಗಳಲ್ಲಿ ಮೂರು ದಿನಗಳ ಹಿಂದೆ ಮಿಶ್ರ ಡಬಲ್ಸ್ ಚಿನ್ನ ಗೆದ್ದಿದ್ದ ಸತೀಶಕುಮಾರ್ ಕರುಣಾಕರನ್ – ಆದ್ಯಾ ವರಿಯತ್ ಜೋಡಿ 21–10, 21–9 ರಿಂದ ಇಯೊಕ್ ಚೊಂಗ್ ಲಿಯೊಂಗ್– ವೆಂಗ್ ಚಿ ಎನ್ಜಿ ಜೋಡಿಯನ್ನು ಸೋಲಿಸಿ ಭಾರತಕ್ಕೆ ಮುನ್ನಡೆ ಒದಗಿಸಿದರು. ಪುರುಷರ ಸಿಂಗಲ್ಸ್‌ನಲ್ಲಿ ಅನುಭವಿ ಲಕ್ಷ್ಯ ಸೇನ್ 21–16, 21–12 ರಿಂದ ಪಾಂಗ್ ಫಾಂಗ್ ಪುಯಿ ಅವರನ್ನು ಸೋಲಿಸಿ ಮುನ್ನಡೆಯನ್ನು 2–0ಗೆ ಹೆಚ್ಚಿಸಿದರು.
ಪಿ.ವೆಂಕಟ ಸಿಂಧು ಬದಲು ಸ್ಥಾನ ಪಡೆದ ಮಾಳವಿಕಾ ಬನ್ಸೋಡ್ ಮಹಿಳಾ ಸಿಂಗಲ್ಸ್‌ನಲ್ಲಿ 21–15, 21–9 ರಿಂದ ಹಾವೊ ವಾಯ್ ಚಾನ್ ಅವರನ್ನು ಸೋಲಿಸಿದರು. ಚಿರಾಗ್ ಶೆಟ್ಟಿ ನಂತರ ಎಂ.ಆರ್.ಅರ್ಜುನ್ ಅವರೊಡನೆ ಪುರುಷರ ಡಬಲ್ಸ್‌ನಲ್ಲಿ 21–15, 21–19 ರಿಂದ ಮಕಾವು ತಂಡದ ಚಿನ್ ಪೊನ್ ಪುಯಿ– ಕೊಕ್ ವಾಯ್ ಚಾನ್ ಜೋಡಿಯನ್ನು ಸೋಲಿಸಿದ್ದರಿಂದ ಭಾರತದ ಮುನ್ನಡೆ 4–0 ಆಯಿತು.
ಮಹಿಳಾ ಡಬಲ್ಸ್‌ನಲ್ಲಿ ವಿಶ್ವ ಕ್ರಮಾಂಕದಲ್ಲಿ ಒಂಬತ್ತನೇ ಸ್ಥಾನದಲ್ಲಿರುವ ಟ್ರೀಸಾ ಜೋಳಿ– ಗಾಯತ್ರಿ ಗೋಪಿಚಂದ್ ಅವರು 21–10, 21–5 ರಿಂದ ಎನ್‌ಜಿ ವೆಂಗ್‌ಚಿ– ಪುಯಿ ಚಿ ವಾ ಅವರನ್ನು ಸುಲಭವಾಗಿ ಹಿಮ್ಮೆಟ್ಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.