ADVERTISEMENT

ಚೆಸ್‌ ಒಲಿಂಪಿಯಾಡ್: ಭಾರತದ ಮೂರನೇ ತಂಡಕ್ಕೆ ಅವಕಾಶ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 11:27 IST
Last Updated 3 ಜುಲೈ 2022, 11:27 IST

ಚೆನ್ನೈ (ಪಿಟಿಐ): ಭಾರತವು 44ನೇ ಚೆಸ್‌ ಒಲಿಂಪಿಯಾಡ್‌ನ ಮುಕ್ತ ವಿಭಾಗದಲ್ಲಿ ಮೂರನೇ ತಂಡವನ್ನು ಕಣಕ್ಕಿಳಿಸಲಿದೆ ಎಂದು ಅಖಿಲ ಭಾರತ ಚೆಸ್‌ ಫೆಡರೇಷನ್‌ (ಎಐಸಿಎಫ್‌) ಹೇಳಿದೆ.

ಭಾರತದ ಆತಿಥ್ಯದಲ್ಲಿ ಇದೇ ಮೊದಲ ಬಾರಿಗೆ ನಡೆಯಲಿರುವ ಚೆಸ್‌ ಒಲಿಂಪಿಯಾಡ್‌, ಜುಲೈ 28 ರಿಂದ ಆ. 10ರ ವರೆಗೆ ಆಯೋಜನೆಯಾಗಿದೆ.

ಮುಕ್ತ ವಿಭಾಗದಲ್ಲಿ ಪಾಲ್ಗೊಳ್ಳಲು ಇದುವರೆಗೆ ಒಟ್ಟು 187 ತಂಡಗಳು ನೋಂದಣಿ ಮಾಡಿಕೊಂಡಿವೆ. ಆತಿಥೇಯ ರಾಷ್ಟ್ರ ಎಂಬ ಕಾರಣಕ್ಕೆ ಮೂರನೇ ತಂಡವನ್ನು ಕಣಕ್ಕಿಳಿಸಲು ವಿಶ್ವ ಚೆಸ್‌ ಸಂಸ್ಥೆ (ಫಿಡೆ) ಭಾರತಕ್ಕೆ ಅವಕಾಶ ನೀಡಿದೆ.

ADVERTISEMENT

ಮುಕ್ತ ವಿಭಾಗದಲ್ಲಿ ಭಾರತ ‘ಎ’ ತಂಡಕ್ಕೆ ಮೂರನೇ ಶ್ರೇಯಾಂಕ ಹಾಗೂ ‘ಬಿ’ ತಂಡಕ್ಕೆ 11ನೇ ಶ್ರೇಯಾಂಕ ದೊರೆತಿದೆ. ಮಹಿಳೆಯರ ವಿಭಾಗದಲ್ಲಿ ಕೊನೇರು ಹಂಪಿ, ಡಿ.ಹರಿಕಾ ಅವರನ್ನೊಳಗೊಂಡ ‘ಎ’ ತಂಡಕ್ಕೆ ಅಗ್ರಶ್ರೇಯಾಂಕ ಲಭಿಸಿದ್ದು, ‘ಬಿ’ ತಂಡ 12ನೇ ಶ್ರೇಯಾಂಕ ಹೊಂದಿದೆ.

‘ಕೊನೆಯ ಕ್ಷಣದಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದಿರುವ ಭಾರತ ‘ಸಿ’ ತಂಡದಲ್ಲಿ ಗ್ರ್ಯಾಂಡ್‌ಮಾಸ್ಟರ್‌ಗಳಾದ ಸೂರ್ಯಶೇಖರ್‌ ಗಂಗೂಲಿ, ಕಾರ್ತಿಕೇಯನ್‌ ಮುರಳಿ, ಎಸ್‌.ಪಿ.ಸೇತುರಾಮನ್, ಅಭಿಜಿತ್‌ ಗುಪ್ತಾ, ಅಭಿಮನ್ಯು ಪುರಾಣಿಕ್‌ ಮತ್ತು ತೇಜಸ್‌ ಬಾಕ್ರೆ ಅವರು ಇದ್ದಾರೆ’ ಎಂದು ಎಐಸಿಎಫ್ ಪ್ರಕಟಣೆ ತಿಳಿಸಿದೆ.

ಭಾರತ ‘ಎ’ ತಂಡದಲ್ಲಿ ವಿದಿತ್ ಗುಜರಾತಿ, ಪಿ.ಹರಿಕೃಷ್ಣ, ಅರ್ಜುನ್ ಎರಿಗೈಸಿ, ಎಸ್‌.ಎಲ್‌.ನಾರಾಯಣನ್, ಕೆ.ಶಶಿಕಿರಣ್ ಇದ್ದರೆ, ‘ಬಿ’ ತಂಡದಲ್ಲಿ ನಿಹಾಲ್‌ ಸರಿನ್, ಡಿ.ಗುಕೇಶ್, ಬಿ.ಅಧಿಬನ್‌, ಆರ್‌.ಪ್ರಜ್ಞಾನಂದ ಮತ್ತು ರೋನಕ್‌ ಸಧ್ವಾನಿ ಅವರು ಕಣಕ್ಕಿಳಿಯುವರು.

‘ಮೂರನೇ ತಂಡವನ್ನು ಕಣಕ್ಕಿಳಿಸಲು ಅವಕಾಶ ಲಭಿಸಿರುವುದು ಅದೃಷ್ಟ ಎನ್ನಬೇಕು. ಚೆಸ್‌ ಒಲಿಂಪಿಯಾಡ್‌ನಲ್ಲಿ ಭಾರತದ 25 ಸ್ಪರ್ಧಿಗಳು ಪಾಲ್ಗೊಳ್ಳುತ್ತಿದ್ದಾರೆ ಎಂಬುದು ಸಂತಸದ ವಿಷಯ’ ಎಂದು ಎಐಸಿಎಫ್‌ ಕಾರ್ಯದರ್ಶಿ ಭರತ್‌ ಸಿಂಗ್‌ ಚೌಹಾನ್‌ ಹೇಳಿದ್ದಾರೆ.

44ನೇ ಚೆಸ್‌ ಒಲಿಂಪಿಯಾಡ್‌ಗೆ ರಷ್ಯಾ ಆತಿಥ್ಯ ವಹಿಸಬೇಕಿತ್ತು. ಆದರೆ ಉಕ್ರೇನ್‌ ಮೇಲಿನ ದಾಳಿಯ ಕಾರಣ ಫಿಡೆ, ಈ ಟೂರ್ನಿಯ ಆತಿಥ್ಯದ ಅವಕಾಶವನ್ನು ರಷ್ಯಾದಿಂದ ಹಿಂದಕ್ಕೆ ಪಡೆದು ಭಾರತಕ್ಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.