ಲಂಡನ್ (ಪಿಟಿಐ): ಕೊನೆಯ ನಿಮಿಷದಲ್ಲಿ ಗೋಲು ಬಿಟ್ಟುಕೊಟ್ಟ ಭಾರತದ ಮಹಿಳೆಯರು ಎಫ್‌ಐಎಚ್ ಪ್ರೊ ಹಾಕಿ ಲೀಗ್ ಪಂದ್ಯದಲ್ಲಿ ಭಾನುವಾರ 1–2 ಗೋಲುಗಳಿಂದ ಆಸ್ಟ್ರೇಲಿಯಾ ವಿರುದ್ಧ ಪರಾಭವಗೊಂಡರು.
ಶನಿವಾರ 2-3ರಿಂದ ಇದೇ ಎದುರಾಳಿ ತಂಡದ ವಿರುದ್ಧ ಸೋತಿದ್ದ ಭಾರತ, ರಿವರ್ಸ್ ಲೆಗ್‌ನ ಪಂದ್ಯದಲ್ಲಿ ಸಮಾನ ಹೋರಾಟ ನಡೆಸಿ ಕೊನೆಯ ಕ್ಷಣದಲ್ಲಿ ಎಡವಿತು. ಸಲೀಮಾ ಟೆಟೆ ಬಳಗವು ತನ್ನ ಮುಂದಿನ ಪಂದ್ಯದಲ್ಲಿ ಮಂಗಳವಾರ ಅರ್ಜೆಂಟೀನಾ ತಂಡವನ್ನು ಎದುರಿಸಲಿದೆ.
ವೈಷ್ಣವಿ ಪಾಲ್ಕೆ (3ನೇ ನಿಮಿಷ) ಭಾರತದ ಪರ ಏಕೈಕ ಗೋಲು ದಾಖಲಿಸಿದರು. ಆಸ್ಟ್ರೇಲಿಯಾ ಪರ ಆ್ಯಮಿ ಲಾಟನ್ (37ನೇ ನಿ) ಮತ್ತು ಲೆಕ್ಸಿ ಪಿಕರಿಂಗ್ (60ನೇ ನಿ) ಗೋಲು ತಂದಿತ್ತರು.
ಪಂದ್ಯದ ಮೊದಲ ನಿಮಿಷದಲ್ಲೇ ಭಾರತ ತಂಡವು ಹ್ಯಾಟ್ರಿಕ್ ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಪಡೆಯಿತು. ಆದರೆ, ಅದೆಲ್ಲವನ್ನೂ ಕೈಚೆಲ್ಲಿತು. ಅದಾದ ಕೆಲವೇ ಕ್ಷಣದಲ್ಲಿ ವೈಷ್ಣವಿ ಗೋಲು ದಾಖಲಿಸಿ, ಭಾರತಕ್ಕೆ ಮುನ್ನಡೆ ಒದಗಿಸಿದರು. ಮೊದಲ ಕ್ವಾರ್ಟರ್‌ನ ಕೊನೆಯಲ್ಲಿ ಎದುರಾಳಿ ತಂಡ ಪಡೆದ ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಭಾರತದ ಆಟಗಾರ್ತಿಯರು ಯಶಸ್ವಿಯಾಗಿ ತಡೆದರು. ವಿರಾಮದ ವೇಳೆವರೆಗೂ ಭಾರತ 1–0 ಮುನ್ನಡೆ ಕಾಯ್ದುಕೊಂಡಿತ್ತು.
ಮೂರನೇ ಕ್ವಾರ್ಟರ್‌ನ ಏಳನೇ ನಿಮಿಷದಲ್ಲಿ ಆ್ಯಮಿ ಅಮೋಘವಾಗಿ ಫೀಲ್ಡ್ ಗೋಲು ದಾಖಲಿಸಿದ್ದರಿಂದ ಉಭಯ ತಂಡಗಳು 1–1ರ ಸಮಬಲ ಸಾಧಿಸಿದವು. ಅಂತಿಮ ಕ್ವಾರ್ಟರ್‌ನಲ್ಲಿ ಭಾರತಕ್ಕೆ ಐದು ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿದರೂ ಅದರ ಲಾಭ ಪಡೆಯಲು ವಿಫಲವಾಯಿತು. ಡ್ರಾ ಆಗುವಂತೆ ಕಂಡಿದ್ದ ಪಂದ್ಯದ ಕೊನೆಯ ಕ್ಷಣದಲ್ಲಿ ಆಸ್ಟ್ರೇಲಿಯಾದ ಲೆಕ್ಸಿ, ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೆಲುವಿನ ಗೋಲು ದಾಖಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.