ADVERTISEMENT

ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್: ಅಮಿತ್‌, ಮೇರಿ ಮೇಲೆ ನಿರೀಕ್ಷೆ

ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್ ಇಂದಿನಿಂದ: ಉತ್ತಮ ಸಾಮರ್ಥ್ಯದ ವಿಶ್ವಾಸದಲ್ಲಿ ಭಾರತ

ಪಿಟಿಐ
Published 23 ಮೇ 2021, 13:53 IST
Last Updated 23 ಮೇ 2021, 13:53 IST
ಅಮಿತ್ ಪಂಘಲ್‌– ಪಿಟಿಐ ಚಿತ್ರ
ಅಮಿತ್ ಪಂಘಲ್‌– ಪಿಟಿಐ ಚಿತ್ರ   

ದುಬೈ: ಒಲಿಂಪಿಕ್ಸ್‌ಗೆ ಸಜ್ಜಾಗುತ್ತಿರುವ ಭಾರತದ ಬಾಕ್ಸರ್‌ಗಳಿಗೆ ಏಷ್ಯನ್ ಚಾಂಪಿಯನ್‌ಷಿಪ್ ಉತ್ತಮ ವೇದಿಕೆಯಾಗಿದ್ದು, ಸೋಮವಾರ ಇಲ್ಲಿ ಆರಂಭವಾಗಲಿದೆ. ಕಳೆದ ಆವೃತ್ತಿಗಿಂತ ಈ ಬಾರಿ ಉತ್ತಮ ಸಾಮರ್ಥ್ಯ ತೋರುವ ನಿರೀಕ್ಷೆಯಲ್ಲಿ ಭಾರತದ ಬಾಕ್ಸರ್‌ಗಳಿದ್ದಾರೆ.

ಭಾರತದ 19 ಮಂದಿ (ಒಂಬತ್ತು ಮಹಿಳೆಯರು, 10 ಪುರುಷರು) ಸ್ಪರ್ಧೆಯಲ್ಲಿದ್ದು, ಪದಕಗಳನ್ನು ಬಾಚಿಕೊಳ್ಳಲು ಸಿದ್ಧವಾಗಿದ್ದಾರೆ. ಬಹುಮಾನ ಮೊತ್ತದೊಂದಿಗೆ ಬೋನಸ್‌ ಕೂಡ ಈ ಆವೃತ್ತಿಯಲ್ಲಿ ಬಾಕ್ಸರ್‌ಗಳ ಕೈ ಸೇರಲಿದೆ.

ಭಾರತದ ಬಾಕ್ಸರ್‌ಗಳ ತಂಡವು ಶನಿವಾರ ಇಲ್ಲಿ ಬಂದು ತಲುಪಿದೆ.

ADVERTISEMENT

ಥಾಯ್ಲೆಂಡ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಷಿಪ್‌ನ 2019ರ ಆವೃತ್ತಿಯಲ್ಲಿ ಭಾರತ ಎರಡು ಚಿನ್ನ, ನಾಲ್ಕು ಬೆಳ್ಳಿ ಸೇರಿ ಒಟ್ಟು 13 ಪದಕಗಳನ್ನು ಗೆದ್ದುಕೊಂಡಿತ್ತು. ಈ ಬಾರಿ ಹೆಚ್ಚಿನ ಪದಕಗಳ ನಿರೀಕ್ಷೆಯನ್ನು ಇಟ್ಟುಕೊಂಡಿದೆ.

ಒಲಿಂಪಿಕ್ಸ್‌ ಟಿಕೆಟ್ ಗಿಟ್ಟಿಸಿರುವ, ಹಾಲಿ ಚಾಂಪಿಯನ್ ಅಮಿತ್ ಪಂಘಲ್‌ (52 ಕೆಜಿ ವಿಭಾಗ), ಕಳೆದ ಆವೃತ್ತಿಯ ಬೆಳ್ಳಿ ಪದಕ ವಿಜೇತ ಆಶಿಶ್ ಕುಮಾರ್‌ (75 ಕೆಜಿ), ವಿಕಾಸ್ ಕೃಷ್ಣನ್ (69 ಕೆಜಿ) ಮತ್ತು ಶಿವ ಥಾಪಾ (64 ಕೆಜಿ) ಅವರು ಪುರುಷರ ವಿಭಾಗದಲ್ಲಿ ನಿರೀಕ್ಷೆ ಮೂಡಿಸಿದ್ದಾರೆ. ದಕ್ಷಿಣ ಏಷ್ಯಾ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ವಿನೋದ್ ತನ್ವರ್‌ (49 ಕೆಜಿ ವಿಭಾಗ) ಅವರಿಗೆ ಕೋವಿಡ್ ಖಚಿತಪಟ್ಟಿದ್ದರಿಂದ ಅವರನ್ನು ತಂಡದಿಂದ ಕೈ ಬಿಡಲಾಗಿದೆ.

ಮಹಿಳೆಯರ ವಿಭಾಗದಲ್ಲಿ, ಆರು ಬಾರಿಯ ವಿಶ್ವ ಚಾಂಪಿಯನ್‌ ಎಂ.ಸಿ.ಮೇರಿ ಕೋಮ್‌ (51 ಕೆಜಿ ವಿಭಾಗ), ಸಿಮ್ರನ್‌ಜೀತ್ ಕೌರ್‌ (60 ಕೆಜಿ), ಲವ್ಲಿನಾ ಬೊರ್ಗೊಹೈನ್‌ (69 ಕೆಜಿ) ಮತ್ತು ಹಾಲಿ ಚಾಂಪಿಯನ್ ಪೂಜಾ ರಾಣಿ (75 ಕೆಜಿ) ಭರವಸೆ ಮೂಡಿಸಿದ್ದಾರೆ.

ಭಾರತದಲ್ಲಿ ನಿಗದಿಯಾಗಿದ್ದ ಈ ಟೂರ್ನಿಯನ್ನು ಕೋವಿಡ್‌ ಹಿನ್ನೆಲೆಯಲ್ಲಿ ದುಬೈಗೆ ಸ್ಥಳಾಂತರ ಮಾಡಲಾಗಿದೆ. ಟೂರ್ನಿಯಲ್ಲಿ ಚಿನ್ನ ಗೆದ್ದವರಿಗೆ ₹ 7 ಲಕ್ಷ, ಬೆಳ್ಳಿ ಪದಕ ಗೆದ್ದವರಿಗೆ ಮೂರೂವರೆ ಲಕ್ಷ ಮತ್ತು ಕಂಚಿನ ಪದಕ ವಿಜೇತರಿಗೆ ₹ 1ಲಕ್ಷ 80 ಸಾವಿರ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.