ADVERTISEMENT

ಫಿಡೆ ಉಪಾಧ್ಯಕ್ಷರಾಗಿ ಆನಂದ್

ಅಧ್ಯಕ್ಷರಾಗಿ ದೊರ್ಕೊವಿಚ್‌ ಪುನರಾಯ್ಕೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 14:28 IST
Last Updated 7 ಆಗಸ್ಟ್ 2022, 14:28 IST
ವಿಶ್ವನಾಥನ್‌ ಆನಂದ್
ವಿಶ್ವನಾಥನ್‌ ಆನಂದ್   

ಚೆನ್ನೈ (ಪಿಟಿಐ): ಭಾರತದ ಚೆಸ್‌ ದಂತಕತೆ ವಿಶ್ವನಾಥನ್‌ ಆನಂದ್‌ ಅವರು ಅಂತರರಾಷ್ಟ್ರೀಯ ಚೆಸ್‌ ಸಂಸ್ಥೆಯ (ಫಿಡೆ) ಉಪಾಧ್ಯಕ್ಷರಾಗಿ ಆಯ್ಕೆಯಾದರು. ರಷ್ಯಾದ ಅರ್ಕೇದಿ ದೊರ್ಕೊವಿಚ್‌ ಅವರು ಅಧ್ಯಕ್ಷರಾಗಿ ಇನ್ನೊಂದು ಅವಧಿಗೆ ಮರು ಆಯ್ಕೆಯಾದರು.

ಇಲ್ಲಿ ನಡೆಯುತ್ತಿರುವ 44ನೇ ಚೆಸ್‌ ಒಲಿಂಪಿಯಾಡ್‌ನ ಜತೆಯಲ್ಲೇ ಫಿಡೆ ವಾರ್ಷಿಕ ಮಹಾಸಭೆ ನಡೆಯಿತು.

ನೂತನ ಅಧ್ಯಕ್ಷರ ಆಯ್ಕೆಗೆ ಭಾನುವಾರ ನಡೆದ ಚುನಾವಣೆಯಲ್ಲಿ ದೊರ್ಕೊವಿಚ್‌ 157 ಮತಗಳನ್ನು ಪಡೆದರು. ಅವರ ಎದುರಾಳಿ ಆಂಡ್ರಿ ಬರಿಶ್‌ಪೊಲೆಟ್ಸ್‌ 16 ಮತಗಳನ್ನು ಗಳಿಸಿದರು. ಒಂದು ಮತ ಅಸಿಂಧುವಾದರೆ ಐವರು ಸದಸ್ಯರು ಮತದಾನದಿಂದ ದೂರವುಳಿದರು.

ADVERTISEMENT

ಆಡಳಿತಗಾರನಾಗಿ ಚೆಸ್‌ ಕ್ರೀಡೆಯ ಬೆಳವಣಿಗೆಯಲ್ಲಿ ಕೈಜೋಡಿಸಬೇಕು ಎಂದು ಆನಂದ್‌ ಇತ್ತೀಚೆಗೆ ಹೇಳಿದ್ದರು. ಅದೇ ಉದ್ದೇಶದಿಂದ ಅವರು ದೊರ್ಕೊವಿಚ್‌ ಅವರ ತಂಡವನ್ನು ಸೇರಿಕೊಂಡಿದ್ದರು.

‘ಆನಂದ್‌ ಉಪಾಧ್ಯಕ್ಷನ ಸ್ಥಾನಕ್ಕೆ ಸ್ಪರ್ಧಿಸುತ್ತಿರುವುದು ಹೆಮ್ಮೆಯ ವಿಚಾರ. ಅವರು ಭಾರತ ಮಾತ್ರವಲ್ಲ, ಇಡೀ ಜಗತ್ತಿನಲ್ಲಿ ಜನಪ್ರಿಯತೆ ಹೊಂದಿದ್ದಾರೆ. ಚೆಸ್‌ ಕ್ರೀಡೆಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ’ ಎಂದು ದೊರ್ಕೊವಿಚ್ ಚುನಾವಣೆಗೆ ಮುನ್ನ ಹೇಳಿದ್ದರು.

ಭಾರತದ ಮೊದಲ ಗ್ರ್ಯಾಂಡ್‌ಮಾಸ್ಟರ್‌ ಎನಿಸಿಕೊಂಡಿರುವ ಆನಂದ್‌ ಅವರು ಐದು ಸಲ ವಿಶ್ವ ಚಾಂಪಿಯನ್‌ ಎನಿಸಿದ್ದರು. ಈಚೆಗೆ ಕೆಲ ವರ್ಷಗಳಿಂದ ಟೂರ್ನಿಗಳಲ್ಲಿ ಪಾಲ್ಗೊಳ್ಳುವುದನ್ನು ಕಡಿಮೆಗೊಳಿಸಿರುವ ಅವರು ಕೋಚಿಂಗ್‌ನತ್ತ ಗಮನ ಹರಿಸಿದ್ದರು.

ಚೆಸ್‌ ಒಲಿಂಪಿಯಾಡ್‌ನಲ್ಲಿ ಪಾಲ್ಗೊಂಡಿರುವ ಭಾರತದ ತಂಡಗಳಿಗೆ ಅವರು ಮಾರ್ಗದರ್ಶಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.