ADVERTISEMENT

ಕಂಚಿನ ಪದಕ ಗೆದ್ದು ತವರಿಗೆ ಬಂದ ಭಾರತ ಹಾಕಿ ತಂಡಕ್ಕೆ ಅದ್ಧೂರಿ ಸ್ವಾಗತ

ಸ್ಪೇನ್‌ ತಂಡವನ್ನು ಮಣಿಸಿ ಕಂಚು ಗೆದ್ದಿದ್ದ ಭಾರತ

ಪಿಟಿಐ
Published 10 ಆಗಸ್ಟ್ 2024, 16:16 IST
Last Updated 10 ಆಗಸ್ಟ್ 2024, 16:16 IST
<div class="paragraphs"><p>ನವದೆಹಲಿಯ ವಿಮಾನ ನಿಲ್ದಾಣದಲ್ಲಿ ಶನಿವಾರ ಭಾರತ ಹಾಕಿ ತಂಡದ ಆಟಗಾರರನ್ನು ಗೌರವಿಸಲಾಯಿತು.</p></div>

ನವದೆಹಲಿಯ ವಿಮಾನ ನಿಲ್ದಾಣದಲ್ಲಿ ಶನಿವಾರ ಭಾರತ ಹಾಕಿ ತಂಡದ ಆಟಗಾರರನ್ನು ಗೌರವಿಸಲಾಯಿತು.

   

–ಪಿಟಿಐ ಚಿತ್ರ

ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದು ತವರಿಗೆ ಬಂದ ಭಾರತ ಹಾಕಿ ತಂಡದ ಆಟಗಾರರಿಗೆ ಶನಿವಾರ ನವದೆಹಲಿಯ ವಿಮಾನನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ನೀಡಲಾಗಿತು.

ADVERTISEMENT

ಮೂರನೇ ಸ್ಥಾನಕ್ಕಾಗಿ ಗುರುವಾರ ನಡೆದ ಪಂದ್ಯದಲ್ಲಿ ಭಾರತದ ಆಟಗಾರರು 2–1 ಗೋಲುಗಳಿಂದ ಸ್ಪೇನ್‌ ತಂಡವನ್ನು ಮಣಿಸಿ, ಒಲಿಂಪಿಕ್ಸ್‌ನಲ್ಲಿ ಸತತ ಎರಡನೇ ಬಾರಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು.

ಹಾಕಿ ತಂಡದ ಎಲ್ಲಾ ಆಟಗಾರರು ತವರಿಗೆ ಬಂದಿಲ್ಲ. ಭಾನುವಾರ ಒಲಿಂಪಿಕ್ಸ್‌ ಸಮಾರೋಪ ಸಮಾರಂಭ ನಡೆಯಲಿದ್ದು, ಹೀಗಾಗಿ ಕೆಲ ಆಟಗಾರರು ಪ್ಯಾರಿಸ್‌ನಲ್ಲೇ ಉಳಿಸಿದ್ದಾರೆ.

ಭಾರತದ ‘ವಾಲ್‌’ ಖ್ಯಾತಿಯ ಗೋಲ್‌ಕೀಪರ್‌ ಪಿ.ಆರ್‌. ಶ್ರೀಜೇಶ್‌ ಅವರು ಶೂಟರ್‌ ಮನು ಭಾಕರ್‌ ಅವರೊಂದಿಗೆ ಸಮಾರೋಪದಲ್ಲಿ ಧ್ವಜಧಾರಿಯಾಗಲಿದ್ದಾರೆ. ಅವರಿಗೆ ಇದು ನಾಲ್ಕನೇ ಒಲಿಂಪಿಕ್ಸ್‌ ಆಗಿದೆ. ಅವರು ಅಂತರರಾಷ್ಟ್ರೀಯ ಹಾಕಿಗೂ ನಿವೃತ್ತಿ ಘೋಷಿಸಿದ್ದಾರೆ.

ಶ್ರೀಜೇಶ್‌ ಅವರೊಂದಿಗೆ ಅಮಿತ್ ರೋಹಿದಾಸ್, ರಾಜ್‌ಕುಮಾರ್ ಪಾಲ್, ಅಭಿಷೇಕ್, ಸುಖಜೀತ್ ಸಿಂಗ್ ಮತ್ತು ಸಂಜಯ್ ಅವರು ಸಮಾರೋಪ ಸಮಾರಂಭದ ನಂತರ ತವರಿಗೆ ವಾಪಸಾಗಲಿದ್ದಾರೆ.

ತಂಡದ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಸೇರಿದಂತೆ ಹಲವು ಆಟಗಾರರು ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಶನಿವಾರ ಬೆಳಿಗ್ಗೆ ಬಂದಿದ್ದು, ಅವರನ್ನು ಹೂಮಾಲೆ ಮತ್ತು ಸಂಭ್ರಮದ ಡೋಲು ವಾದ್ಯಗಳೊಂದಿಗೆ ಸ್ವಾಗತಿಸಲಾಯಿತು.

‘ತಂಡಕ್ಕೆ ಎಲ್ಲ ಕಡೆಯಿಂದಲೂ ಉತ್ತಮ ಸಹಕಾರ, ಪ್ರೋತ್ಸಾಹ ದೊರಕಿದೆ. ಪ್ಯಾರಿಸ್‌ನಲ್ಲಿ ಪದಕ ಗೆದ್ದಿರುವುದು ಸಂತಸವಾಗಿದೆ. ಬೆಂಬಲ ನೀಡಿದ ಎಲ್ಲರಿಗೂ ಕೃತಜ್ಞತೆಗಳು’ ಎಂದು ಹರ್ಮನ್‌ಪ್ರೀತ್‌ ಪ್ರತಿಕ್ರಿಯಿಸಿದರು.

ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಹರ್ಮನ್‌ಪ್ರೀತ್‌ ಒಟ್ಟು 10 ಗೋಲು ಗಳಿಸಿದ್ದು, ಪುರುಷರ ವಿಭಾಗದಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದರು.

ಭಾರತ ಹಾಕಿ ತಂಡಕ್ಕೆ ಇದು 13ನೇ ಒಲಿಂಪಕ್ಸ್‌ ಪದಕವಾಗಿದೆ. ಈ ಮೊದಲು ಎಂಟು ಚಿನ್ನ, ಒಂದು ಬೆಳ್ಳಿ ಮತ್ತು ಮೂರು ಕಂಚು ಗೆದ್ದಿದೆ. 1972ರ ನಂತರ ಇದೇ ಮೊದಲ ಬಾರಿಗೆ ಭಾರತ ಒಲಿಂಪಿಕ್ಸ್‌ನಲ್ಲಿ ಸತತ ಎರಡನೇ ಪದಕ ಗೆದ್ದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.