ADVERTISEMENT

ಡ್ರಾ ಸಾಧಿಸಿದ ಕಿರಿಯರ ಹಾಕಿ ತಂಡ

ಪಿಟಿಐ
Published 14 ಜೂನ್ 2019, 20:00 IST
Last Updated 14 ಜೂನ್ 2019, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬ್ಯಾರನೊವಿಚಿ, ಬೆಲಾರಸ್‌: ಸೊಗಸಾದ ಪ್ರದರ್ಶನ ತೋರಿದ ಭಾರತ ಮಹಿಳಾ ಕಿರಿಯರ ಹಾಕಿ ತಂಡವು ಬೆಲಾರಸ್‌ ಹಿರಿಯರ ತಂಡದೊಂದಿಗೆ ಶುಕ್ರವಾರ 1–1ರ ಡ್ರಾ ಸಾಧಿಸಿತು. ಐದು ಪಂದ್ಯಗಳ ಸರಣಿಯಲ್ಲಿ ಭಾರತ ತಂಡ ಸದ್ಯ 1–2ರ ಹಿನ್ನಡೆಯಲ್ಲಿದೆ.

ಭಾರತದ ಪರ ಗಗನದೀಪ್‌ ಕೌರ್‌ ಗೋಲು ಗಳಿಸಿ ಮಿಂಚಿದರೆ, ಯುಲಿಯಾ ಮಿಕೆಚಿಕ್‌ ಬೆಲಾರಸ್‌ ತಂಡದ ಪರ ಯಶಸ್ಸು ಸಾಧಿಸಿದರು.

ಸ್ಪರ್ಧಾತ್ಮಕ ಪೈಪೋಟಿ ಕಂಡುಬಂದ ಮೊದಲ ಕ್ವಾರ್ಟರ್‌ನಲ್ಲಿ ಭಾರತ ವನಿತೆಯರು ಆಕ್ರಮಣಕಾರಿ ಹಾಗೂ ಸಂಘಟಿತ ಆಟವಾಡಿದರು. ಎದುರಾಳಿ ತಂಡಕ್ಕೆ ಗೋಲು ಗಳಿಸುವ ಯಾವುದೇ ಅವಕಾಶವನ್ನು ನೀಡದೆ ಪ್ರಾಬಲ್ಯ ಮೆರೆದರು.

ADVERTISEMENT

ಎರಡನೇ ಕ್ವಾರ್ಟರ್‌ನಲ್ಲಿ ಬೆಲಾರಸ್‌ ಆಟಗಾರ್ತಿಯರು ಸ್ಪರ್ಧೆಯ ವೇಗ ಹೆಚ್ಚಿಸಿದರು. 23ನೇ ನಿಮಿಷದಲ್ಲಿ ಗೋಲು ಪೆಟ್ಟಿಗೆಗೆ ಚೆಂಡು ಸೇರಿಸಿದ ಯುಲಿಯಾ ಆತಿಥೇಯ ತಂಡದ ಮುನ್ನಡೆಗೆ ಕಾರಣವಾದರು. ಆ ಬಳಿಕ ಭಾರತ ಪೆನಾಲ್ಟಿ ಕಾರ್ನರ್‌ ಅವಕಾಶ ಪಡೆದರೂ ವಿಫಲವಾಯಿತು. ಮತ್ತೊಂದು ಪೆನಾಲ್ಟಿ ಬಳುವಳಿ ಪಡೆದ ಪ್ರವಾಸಿ ಆಟಗಾರ್ತಿಯರು ಈ ಬಾರಿ ಸೋಲಲಿಲ್ಲ. ಗಗನದೀಪ್‌ ಕೌರ್‌ ಅವರು ಎರಡನೇ ಕ್ವಾರ್ಟರ್‌ನ ಕೊನೆಯ ನಿಮಿಷಲದಲ್ಲಿ ಗೋಲು ಗಳಿಸಿ ಸ್ಕೋರ್‌ ಸಮಬಲಗೊಳಿಸಿದರು.

ಆ ಬಳಿಕ ಇತ್ತಂಡಗಳ ಮಧ್ಯೆ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂದರೂ ಗೋಲು ದಾಖಲಾಗಲಿಲ್ಲ. ಜೂನ್‌ 15ರಂದು ಭಾರತ ಹಾಗೂ ಬೆಲಾರಸ್‌ ಕೊನೆಯ ಪಂದ್ಯ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.