ADVERTISEMENT

ಏಷ್ಯಾ ಬ್ಯಾಡ್ಮಿಂಟನ್: ಹಾಂಗ್‌ಕಾಂಗ್‌ ಎದುರು ಭಾರತ ಜಯಭೇರಿ

ಏಷ್ಯಾ ಬ್ಯಾಡ್ಮಿಂಟನ್ ಟೀಮ್‌ ಚಾಂಪಿಯನ್‌ಷಿಪ್‌

ಪಿಟಿಐ
Published 17 ಫೆಬ್ರುವರಿ 2022, 12:22 IST
Last Updated 17 ಫೆಬ್ರುವರಿ 2022, 12:22 IST
ಲಕ್ಷ್ಯ ಸೇನ್‌– ಪಿಟಿಐ ಚಿತ್ರ
ಲಕ್ಷ್ಯ ಸೇನ್‌– ಪಿಟಿಐ ಚಿತ್ರ   

ಷಾ ಆಲಂ, ಮಲೇಷ್ಯಾ: ವಿಶ್ವ ಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತ ಲಕ್ಷ್ಯ ಸೇನ್‌ ನೇತೃತ್ವದ ಭಾರತ ಪುರುಷರ ತಂಡವು ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಹಾಂಗ್‌ಕಾಂಗ್ ಎದುರು ಜಯಿಸಿತು. ಇದರೊಂದಿಗೆ ಟೂರ್ನಿಯ ನಾಕೌಟ್‌ ಹಂತ ಪ್ರವೇಶಿಸುವ ತಂಡದ ಆಸೆ ಜೀವಂತವಾಗುಳಿಯಿತು.

ಗುರುವಾರ ನಡೆದ ಹಣಾಹಣಿಯಲ್ಲಿ ಭಾರತ ತಂಡವು 3–2ರಿಂದ ಗೆಲುವು ಸಾಧಿಸಿತು.

ಮೊದಲ ಪಂದ್ಯದಲ್ಲಿ ಕೊರಿಯಾ ಎದುರು 0–5ರಿಂದ ಮುಗ್ಗರಿಸಿದ್ದ ಭಾರತ ಸಂಕಷ್ಟಕ್ಕೆ ಸಿಲುಕಿತ್ತು. ಈ ಜಯದೊಂದಿಗೆ ‘ಎ’ ಗುಂಪಿನಲ್ಲಿ ತಂಡವು ಸದ್ಯ ಮೂರನೇ ಸ್ಥಾನದಲ್ಲಿದೆ. ಮೂರು ಬಾರಿಯ ಚಾಂಪಿಯನ್‌ ಇಂಡೊನೇಷ್ಯಾ ಮತ್ತು ಕೊರಿಯಾ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನಗಳಲ್ಲಿವೆ.

ADVERTISEMENT

ಹಾಂಗ್‌ಕಾಂಗ್ ಎದುರಿನ ಸಿಂಗಲ್ಸ್ ವಿಭಾಗದಮೊದಲ ಪಂದ್ಯದಲ್ಲಿ ಲಕ್ಷ್ಯ ಸೇನ್‌21-19 21-10ರಿಂದ ಲೀ ಚೆಕ್‌ ಯು ಎದುರು ಜಯಿಸಿದರು. 35 ನಿಮಿಷಗಳವರೆಗೆ ಈ ಹಣಾಹಣಿ ನಡೆಯಿತು.

ಡಬಲ್ಸ್‌ನಲ್ಲಿ ಲಾ ಚೆಯುಕ್ ಹಿಮ್ ಮತ್ತು ಲೀ ಚುನ್ ಹೇ ರೆಜಿನಾಲ್ಡ್ 20-22, 21-15, 21-18ರಲ್ಲಿ ಮಂಜಿತ್ ಸಿಂಗ್ ಖ್ವೈರಕ್ಪಾಮ್ ಮತ್ತು ಡಿಂಕು ಸಿಂಗ್ ಕೊಂತೌಜಮ್ ವಿರುದ್ಧ ರೋಚಕ ಗೆಲುವು ಸಾಧಿಸುವುದರೊಂದಿಗೆ ಹಾಂಗ್‌ಕಾಂಗ್‌ ಪಂದ್ಯದ ಮೇಲೆ ಹಿಡಿತ ಸಾಧಿಸಿತು.

ಕಿರಣ್ ಜಾರ್ಜ್ ಅವರು ಚಾನ್ ಯಿನ್ ಚಾಕ್ ವಿರುದ್ಧ 13-21, 21-17, 9-21ರಿಂದ ಸೋಲುವ ಮೊದಲು ವೀರೋಚಿತ ಹೋರಾಟ ತೋರಿದರು. ಹಾಂಗ್‌ಕಾಂಗ್‌ 2–1ರಿಂದ ಮುನ್ನಡೆ ಸಾಧಿಸಿತು.

ಹರಿಹರನ್ ಮತ್ತು ರೂಬನ್, ಹಾಂಗ್‌ಕಾಂಗ್‌ನ ಚೌ ಹಿನ್ ಲಾಂಗ್ ಮತ್ತು ಲುಯಿ ಚುನ್ ವಾಯ್ ಅವರನ್ನು 21-17, 21-16 ರಿಂದ ಸೋಲಿಸಿ ಭಾರತ ತಂಡದ ಆಸೆ ಜೀವಂತವಾಗಿರಿಸಿದರು.ನಂತರ ಬಳಿಕ ಮಿಥುನ್ ಮಂಜುನಾಥ್‌21-14 17-21 21-11ರಿಂದ ಜೇಸನ್ ಗುಣಾವನ್‌ ಅವರನ್ನು ಸೋಲಿಸಿ ಭಾರತ ಜಯದ ಸಂಭ್ರಮದಲ್ಲಿ ಮಿಂದೇಳುವಂತೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.