ADVERTISEMENT

ಪ್ರೊ ಲೀಗ್‌ ಹಾಕಿ: ಹರ್ಮನ್‌ ಬಳಗಕ್ಕೆ ಜರ್ಮನಿ ಸವಾಲು

ಮಹಿಳಾ ತಂಡಕ್ಕೆ ಸ್ಪೇನ್‌ ಎದುರಾಳಿ

ಪಿಟಿಐ
Published 17 ಫೆಬ್ರುವರಿ 2025, 13:23 IST
Last Updated 17 ಫೆಬ್ರುವರಿ 2025, 13:23 IST
ಭಾರತ ತಂಡದ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌
ಭಾರತ ತಂಡದ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌    

ಭುವನೇಶ್ವರ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ಭಾರತ ಪುರುಷರ ಹಾಕಿ ತಂಡವು ಮಂಗಳವಾರ ಎಫ್ಐಎಚ್‌ ಪ್ರೊ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಜರ್ಮನಿ ತಂಡದ ಸವಾಲನ್ನು ಎದುರಿಸಲಿದೆ.

ಶನಿವಾರ ತವರು ಲೆಗ್‌ನ ಆರಂಭಿಕ ಪಂದ್ಯದಲ್ಲಿ 1–3ರಿಂದ ಸ್ಪೇನ್‌ ತಂಡಕ್ಕೆ ಸೋತಿದ್ದ ಆತಿಥೇಯ ತಂಡವು ಮರುದಿನ ಮರು ಲೆಗ್‌ನ ಹಣಾಹಣಿಯಲ್ಲಿ ಅದೇ ತಂಡವನ್ನು 2–0ಯಿಂದ ಮಣಿಸಿದೆ. ಗೆಲುವಿನ ಹಳಿಗೆ ಮರಳಿರುವ ಭಾರತದ ಪುರುಷರು, ತಮ್ಮ ಮೂರನೇ ಪಂದ್ಯದಲ್ಲಿ ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತ ಜರ್ಮನ್‌ ವಿರುದ್ಧ ಉತ್ತಮ ಆಟ ಪ್ರದರ್ಶಿಸುವ ವಿಶ್ವಾಸದಲ್ಲಿದ್ದಾರೆ.

ಎರಡು ಪಂದ್ಯಗಳಿಂದ ಮೂರು ಅಂಕ ಗಳಿಸಿರುವ ಭಾರತ ತಂಡವು ಪಾಯಿಂಟ್‌ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಜರ್ಮನಿ (4) ಏಳನೇ ಸ್ಥಾನದಲ್ಲಿದೆ. ನೆದರ್ಲೆಂಡ್ಸ್‌ (14), ಇಂಗ್ಲೆಂಡ್‌ (11) ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿವೆ. ಟೂರ್ನಿಯಲ್ಲಿ ಒಟ್ಟು ಒಂಬತ್ತು ತಂಡಗಳು ಸೆಣಸುತ್ತಿವೆ. 

ADVERTISEMENT

ಮೊದಲ ಪಂದ್ಯದಲ್ಲಿ ಎಸಗಿದ್ದ ತಪ್ಪನ್ನು ತಿದ್ದುಕೊಂಡು ಎರಡನೇ ಪಂದ್ಯಕ್ಕೆ ಅದ್ಘುತವಾಗಿ ಪುನರಾಗಮನ ಮಾಡಿದ ಹರ್ಮನ್‌ಪ್ರೀತ್‌ ಬಳಗವು ಸ್ಪೇನ್‌ ವಿರುದ್ಧ ಅಧಿಕಾರಯುತ ಜಯ ಸಾಧಿಸಿತು. ಮನ್‌ದೀಪ್‌ ಸಿಂಗ್‌ ಮತ್ತು ದಿಲ್‌ಪ್ರೀತ್‌ ಸಿಂಗ್‌ ಅವರು ಅಮೋಘವಾಗಿ ಫೀಲ್ಡ್‌ ಗೋಲು ಗಳಿಸಿ, ಗೆಲುವಿನ ರೂವಾರಿಯಾಗಿದ್ದರು.

ಭಾರತ ತಂಡವು ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲಾಗಿ ಪರಿವರ್ತಿಸಲು ಎಡವುತ್ತಿರುವುದು ಮುಖ್ಯ ಕೋಚ್ ಕ್ರೇಗ್ ಫುಲ್ಟನ್ ಅವರನ್ನು ಚಿಂತೆಗೀಡುಮಾಡಿದೆ. ಎರಡು ಪಂದ್ಯಗಳಲ್ಲಿ ಏಳು ಪೆನಾಲ್ಟಿ ಕಾರ್ನರ್‌ ಅವಕಾಶಗಳು ಭಾರತದ ಆಟಗಾರರಿಗೆ ದಕ್ಕಿದರೂ ಒಂದೂ ಬಾರಿಯೂ ಚೆಂಡನ್ನು ಗುರಿ ಸೇರಿಸಲು ಅವರಿಗೆ ಸಾಧ್ಯವಾಗಿಲ್ಲ.

ಕಳೆದ ಆವೃತ್ತಿಯಲ್ಲಿ ಆರನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದ್ದ ಜರ್ಮನಿ ತಂಡಕ್ಕೆ ಈ ಬಾರಿಯೂ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ. ನಾಲ್ಕು ಪಂದ್ಯಗಳ ಪೈಕಿ ಒಂದರಲ್ಲಿ ಮಾತ್ರ ಗೆದ್ದಿದೆ. ಮತ್ತೊಂದರಲ್ಲಿ ಡ್ರಾ ಸಾಧಿಸಿ, ಉಳಿದ ಎರಡು ಪಂದ್ಯಗಳಲ್ಲಿ ಸೋತಿದೆ.

ಮಹಿಳೆಯರಿಗೆ ಸ್ಪೇನ್‌ ಸವಾಲು: ಭಾರತ ವನಿತೆಯರು ಮಂಗಳವಾರ ತಮ್ಮ ಮೂರನೇ ಪಂದ್ಯದಲ್ಲಿ ಸ್ಪೇನ್‌ ತಂಡದೊಂದಿಗೆ ಮುಖಾಮುಖಿಯಾಗುವರು. ಬುಧವಾರವೂ ಅದೇ ತಂಡದ ವಿರುದ್ಧ ಕಣಕ್ಕೆ ಇಳಿಯುವರು.

ತವರು ಲೆಗ್‌ನ ಮೊದಲ ಪಂದ್ಯದಲ್ಲಿ 3–2ರಿಂದ ಇಂಗ್ಲೆಂಡ್‌ ವಿರುದ್ಧ ಗೆದ್ದು ಶುಭಾರಂಭ ಮಾಡಿದ್ದ ಸಲಿಮಾ ಟೆಟೆ ಬಳಗವು ಎರಡನೇ ಪಂದ್ಯದಲ್ಲಿ ಅದೇ ತಂಡದ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 1–2ರಿಂದ (ನಿಗದಿತ ಅವಧಿಯಲ್ಲಿ 2–2 ಗೋಲು) ಪರಾಭವಗೊಂಡಿದೆ. 

ಆಡಿರುವ ಎರಡು ಪಂದ್ಯಗಳಿಂದ ಮೂರು ಅಂಕ ಗಳಿಸಿರುವ ಭಾರತ ತಂಡವು ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಆರು ಪಂದ್ಯಗಳಿಂದ 8 ಅಂಕ (2 ಗೆಲುವು, 1 ಡ್ರಾ ಮತ್ತು 3 ಸೋಲು) ಪಡೆದಿರುವ ಸ್ಪೇನ್‌ ತಂಡವು ನಾಲ್ಕನೇ ಸ್ಥಾನದಲ್ಲಿವೆ. ಚೀನಾ (16) ಮತ್ತು ನೆದರ್ಲೆಂಡ್ಸ್‌ (9) ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿವೆ.

ಇಂದಿನ ‍ಪಂದ್ಯಗಳು

ಮಹಿಳೆಯರ ವಿಭಾಗ

ಭಾರತ–ಸ್ಪೇನ್‌

ಪಂದ್ಯ ಆರಂಭ: ಸಂಜೆ 5.15

ಪುರುಷರ ವಿಭಾಗ

ಭಾರತ–ಜರ್ಮನಿ

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌, ಡಿಡಿ ಸ್ಪೋರ್ಟ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.