ADVERTISEMENT

ಆರ್ಚರಿ: ಭಾರತ ರಿಕರ್ವ್‌ ತಂಡಕ್ಕೆ ಬೆಳ್ಳಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 20:00 IST
Last Updated 16 ಜೂನ್ 2019, 20:00 IST
ಅತನು ದಾಸ್‌ -–ರಾಯಿಟರ್ಸ್‌ ಚಿತ್ರ
ಅತನು ದಾಸ್‌ -–ರಾಯಿಟರ್ಸ್‌ ಚಿತ್ರ   

ಡೆನ್‌ ಬಾಷ್‌ (ದಿ ನೆದರ್ಲೆಂಡ್ಸ್‌): ಪ್ರಬಲ ಚೀನಾ ವಿರುದ್ಧ ಫೈನಲ್‌ನಲ್ಲಿ ಒತ್ತಡಕ್ಕೆ ಸಿಲುಕಿದ ಭಾರತ ಪುರಷರ ರಿಕರ್ವ್ ತಂಡ, ಭಾನುವಾರ ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡಿತು.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಚಿನ್ನದ ಯತ್ನದಲ್ಲಿದ್ದ ಭಾರತ ತಂಡ ಸ್ಪರ್ಧೆಯ ಮಧ್ಯಮ ಹಂತದಲ್ಲಿ 27– 26 ಮುನ್ನಡೆಯಲ್ಲಿತ್ತು. ಆದರೆ ತರುಣ್‌ದೀಪ್‌ ರಾಯ್‌, ಅತನು ದಾಸ್‌, ಪ್ರವೀಣ್‌ ಜಾಧವ್‌ ಒಳಗೊಂಡ ತಂಡ ಪ್ರಶಸ್ತಿಯ ಸುತ್ತಿನಲ್ಲಿ ದೊರೆತ ಈ ಅಲ್ಪ ಮುನ್ನಡೆಯನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ.

ಡಿಂಗ್‌ ಯಿಲಾಂಗ್‌, ವೀ ಶಾವೊ ಕ್ಸುನ್‌ ಮತ್ತು ಫೆಂಗ್‌ ಹಾವೊ ಒಳ ಗೊಂಡ ಚೀನಾ ಚೇತರಿಸಿಕೊಂಡ ನಂತರ ಮೇಲುಗೈ ಸಾಧಿಸಿ 6–2ರಲ್ಲಿ ಜಯಗಳಿಸಿತು. ಚೀನಾ ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ದಕ್ಷಿಣ ಕೊರಿಯಾ ಮೇಲೆ ಜಯಗಳಿಸಿತ್ತು.ಭಾರತ ಈ ಚಾಂಪಿಯನ್‌ಷಿಪ್‌ನಲ್ಲಿ ಒಂದು ಬೆಳ್ಳಿ, ಎರಡು ಕಂಚಿನ ಪದಕಗಳಿಗೆ ಸಮಾಧಾನಪಟ್ಟುಕೊಳ್ಳಬೇಕಾಯಿತು. ಮಹಿಳೆಯ ಕಾಂಪೌಂಡ್‌ ಟೀಮ್ ಮತ್ತು ವೈಯಕ್ತಿಕ ವಿಭಾಗದಲ್ಲಿ ತಂಡಕ್ಕೆ ಕಂಚಿನ ಪದಕಗಳು ಬಂದಿದ್ದವು.

ADVERTISEMENT

ಭಾರತ ರಿಕರ್ವ್‌ ತಂಡ ವಿಭಾಗದಲ್ಲಿ ರಜತ ಗೆಲ್ಲುತ್ತಿರುವುದು ಇದು ಆರನೇ ಬಾರಿ. 14 ವರ್ಷಗಳ ಹಿಂದೆ ಕೊನೆಯ ಬಾರಿ ಈ ಪದಕ ಗೆದ್ದುಕೊಂಡಿತ್ತು. ‘ಖುಷಿಯಾಗಿದೆ. ಜೊತೆಗೆ ಬೇಸರ ಕೂಡ. ನಮಗೆ ಚಿನ್ನ ಗೆಲ್ಲಲು ಇದೊಂದು ದೊಡ್ಡ ಅವಕಾಶವಾಗಿತ್ತು. ನಾವು ಬೆಳ್ಳಿ ಪದಕಗಳನ್ನು ಹಿಂದೆಯೂ ಗೆದ್ದುಕೊಂಡಿದ್ದೇವೆ. ಆದರೆ ಚಿನ್ನ ಗೆಲ್ಲಲಾಗುತ್ತಿಲ್ಲ’ ಎಂದು ತರುಣ್‌ದೀಪ್‌ ರಾಯ್‌ ಹೇಳಿದರು. 2005ರಲ್ಲಿ ಮ್ಯಾಡ್ರಿಡ್‌ನಲ್ಲಿ ಬೆಳ್ಳಿ ಗೆದ್ದ ತಂಡದಲ್ಲೂ ರಾಯ್‌ ಭಾಗವಹಿಸಿದ್ದರು.

2011ರಲ್ಲಿ ಅಗ್ರ ಕ್ರಮಾಂಕದಲ್ಲಿದ್ದ ಭಾರತ ರಿಕರ್ವ್‌ ತಂಡ ನಂತರ 17ನೇ ಸ್ಥಾನಕ್ಕೆ ಕುಸಿದಿತ್ತು. ಆದರೆ ಈ ಚಾಂಪಿಯನ್‌ಷಿಪ್‌ನಲ್ಲಿ ಅಚ್ಚರಿಯ ಪ್ರದರ್ಶನ ನೀಡಿ ಫೈನಲ್‌ ಪ್ರವೇಶಿಸಿತ್ತು. ಆ ಹಾದಿಯಲ್ಲಿ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.