ಸಾಂದರ್ಭಿಕ-ಚಿತ್ರ
–ಎ.ಐ ಚಿತ್ರ
ನವದೆಹಲಿ: ಸಂಗ್ರೂರ್‌ನಲ್ಲಿ ಇದೇ ತಿಂಗಳ 27ರಂದು ಪಂಜಾಬಿನ ಸಂಗ್ರೂರಿನಲ್ಲಿ ನಿಗದಿಯಾಗಿರುವ ಇಂಡಿಯನ್ ಓಪನ್ ಅಥ್ಲೆಟಿಕ್ ಕೂಟವನ್ನು, ಸ್ಪರ್ಧಿಗಳ ಸಂಖ್ಯೆ ನಿರೀಕ್ಷೆ ಮೀರಿದ್ದರಿಂದ ಮತ್ತೊಂದು ದಿನಕ್ಕೆ ವಿಸ್ತರಿಸಲಾಗಿದೆ. ದೇಶೀ ಸರ್ಕಿಟ್‌ನಲ್ಲಿ ಮೊದಲ ಬಾರಿ ಈ ರೀತಿಯ ಬೆಳವಣಿಗೆಯಾಗಿದೆ.
ಸುಮಾರು 900 ಸ್ಪರ್ಧಿಗಳು ನೋಂದಾಯಿಸಿದ ಪರಿಣಾಮ ಒಂದು ದಿನ ಬದಲು ಎರಡು ದಿನ (ಜುಲೈ 27 ಮತ್ತು 28ರಂದು) ಸ್ಪರ್ಧೆಗಳನ್ನು ಹಮ್ಮಿಕೊಳ್ಳಬೇಕಾದ ಅಗತ್ಯ ಎದುರಾಗಿದೆ ಎಂದು ಭಾರತ ಅಥ್ಲೆಟಿಕ್ ಫೆಡರೇಷನ್ (ಎಎಫ್‌ಐ) ಸುತ್ತೋಲೆಯಲ್ಲಿ ತಿಳಿಸಿದೆ.
ಸ್ಪರ್ಧೆಗಳ ಪಟ್ಟಿಯನ್ನು ಶೀಘ್ರವೇ ಎಎಫ್‌ಐ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಅಥ್ಲೀಟುಗಳು ಇದಕ್ಕೆ ಅನುಗುಣವಾಗಿ ತಮ್ಮ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದು ಅದು ತಿಳಿಸಿದೆ.
ಈ ಕ್ಯಾಲೆಂಡರ್ ವರ್ಷದಿಂದ ಎಎಫ್‌ಐ ಇದೇ ಮೊದಲ ಬಾರಿ ಎಂಟು ಇಂಡಿಯನ್ ಓಪನ್ ಅಥ್ಲೆಟಿಕ್ ಕೂಟಗಳನ್ನು ದೇಶದ ಬೇರೆ ಬೇರೆ ಕಡೆ ನಡೆಸುತ್ತಿದೆ. ಅಥ್ಲೀಟುಗಳಿಗೆ ಹೆಚ್ಚಿನ ಅವಕಾಶ ನೀಡಲು ಮತ್ತು ಅವರು ತಮ್ಮ ತವರು ಅಥವಾ ನೆರೆಯ ರಾಜ್ಯಗಳಲ್ಲಿ ಸ್ಪರ್ಧಿಸಲು ಅನುವಾಗುವಂತೆ ಈ ಕ್ರಮ ಕೈಗೊಂಡಿದೆ.
ಸಂಗ್ರೂರಿನಲ್ಲಿ ಎರಡನೇ ಬಾರಿ ಈ ಕೂಟ ನಡೆಯುತ್ತಿದೆ. ಏಪ್ರಿಲ್ 1ರಂದು ಇಲ್ಲಿ ಇಂಡಿಯನ್ ಓಪನ್ ಕೂಟ ನಡೆದಾಗ 130 ಮಂದಿ ಭಾಗವಹಿಸಿದ್ದರು.
ಗುಜರಾತ್ ನಡಿಯಾಡ್ (ಏಪ್ರಿಲ್ 5), ರಾಂಚಿ (ಏಪ್ರಿಲ್ 10), ಚೆನ್ನೈ (ಏಪ್ರಿಲ್ 15), ಬೆಂಗಳೂರು (ಜೂನ್ 28) ಮತ್ತು ಪುಣೆಯಲ್ಲಿ (ಜುಲೈ 12) ಇದಕ್ಕೆ ಮೊದಲು ಈ ಕೂಟಗಳು ನಡೆದಿವೆ. ಸಂಗ್ರೂರ್ ಕೂಟಕ್ಕಿಂತ ಪಟ್ನಾದಲ್ಲಿ ಜುಲೈ 19ರಂದು ಪಟ್ನಾದಲ್ಲಿ ಇಂಡಿಯನ್ ಓಪನ್ ಕೂಟ ನಡೆಯಲಿದೆ.
ಆಗಸ್ಟ್ 20 ರಿಂದ 24ರವರೆಗೆ ಚೆನ್ನೈನಲ್ಲಿ ರಾಷ್ಟ್ರೀಯ ಅಂತರ–ರಾಜ್ಯ ಸೀನಿಯರ್ ಚಾಂಪಿಯನ್‌ಷಿಪ್ ನಡೆಯಲಿದೆ. ಈ ಕೂಟದಲ್ಲಿ ಭಾಗವಹಿಸಬೇಕಾದರೆ, ಇಂಥ ದೇಶಿ ಕೂಟಗಳಲ್ಲಿ (ಮೇ 1 ರಿಂದ ಆಗಸ್ಟ್ 10ರ ನಡುವೆ) ಎಎಫ್‌ಐ ನಿಗದಿಪಡಿಸಿದ ಮಾನದಂಡಗಳನ್ನು ಅಥ್ಲೀಟುಗಳು ತಲುಪಬೇಕು ಎಂದು ಎಎಫ್‌ಐ ಕಡ್ಡಾಯಗೊಳಿಸಿದೆ.
ಅಥ್ಲೀಟುಗಳು ತಮ್ಮ ರಾಜ್ಯದ ಸಂಸ್ಥೆಗಳು ಆಯೋಜಿಸಿದ ಚಾಂಪಿಯನ್‌ಷಿಪ್‌ಗಳಲ್ಲಿ ಭಾಗವಹಿಸುವುದರ ಜೊತೆಗೆ ಎಎಫ್‌ಐ ಆಯೋಜಿಸಿದ ಯಾವುದಾದರೂ ಒಂದು ಕೂಟದಲ್ಲಿ ಭಾಗವಹಿಸಬೇಕೆಂದೂ ಎಎಫ್‌ಐ ನಿಯಮ ಹೇರಿದೆ.
ಒಂದೊಮ್ಮೆ ರಾಜ್ಯ ಸಂಸ್ಥೆಯು ಮೇಲ್ಕಂಡ ಅವಧಿಯಲ್ಲಿ ಯಾವುದೇ ಚಾಂಪಿಯನ್‌ಷಿಪ್ ನಡೆಸದಿದ್ದಲ್ಲಿ, ಎಎಫ್‌ಐನ ಎರಡು ಕೂಟಗಳಲ್ಲಿ (ಇಂಡಿಯನ್ ಓಪನ್ ಅಥವಾ ಗ್ರ್ಯಾನ್‌ಪ್ರಿ ಕೂಟಗಳು) ಅಥ್ಲೀಟುಗಳು ಭಾಗವಹಿಸಿ ನಿಗದಿಪಡಿಸಿದ ಅರ್ಹತಾ ಮಾನದಂಡ ಪೂರೈಸಬೇಕಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.