ADVERTISEMENT

ಪ್ಯಾರಾ ಅಥ್ಲೀಟ್‌ಗಳ ಗರಿಷ್ಠ ಸಾಧನೆ

ಕೊನೆಯ ದಿನ ಬ್ಯಾಡ್ಮಿಂಟನ್‌ನಲ್ಲಿ ಎರಡು ಚಿನ್ನ; ಭಾರತದ ಮಡಿಲಿಗೆ ಒಟ್ಟು 72 ಪದಕಗಳು

ಪಿಟಿಐ
Published 13 ಅಕ್ಟೋಬರ್ 2018, 16:07 IST
Last Updated 13 ಅಕ್ಟೋಬರ್ 2018, 16:07 IST

ಜಕಾರ್ತ, ಇಂಡೊನೇಷ್ಯಾ: ಅಮೋಘ ಸಾಧನೆ ಮಾಡಿದ ಭಾರತದ ಕ್ರೀಡಾಪಟುಗಳು ಒಟ್ಟು 72 ಪದಕಗಳನ್ನು ಬಗಲಿಗೆ ಹಾಕಿಕೊಂಡು ಏಷ್ಯನ್‌ ಪ್ಯಾರಾ ಕ್ರೀಡಾಕೂಟದಲ್ಲಿ ಪಾರಮ್ಯ ಮೆರೆದರು. 15 ಚಿನ್ನ, 24 ಬೆಳ್ಳಿ ಮತ್ತು 33 ಕಂಚಿನ ಪದಕಗಳನ್ನು ಗಳಿಸಿದ ಭಾರತ ಕೂಟದಲ್ಲಿ ಈ ವರೆಗಿನ ಗರಿಷ್ಠ ಸಾಧನೆ ಮಾಡಿತು.

172 ಚಿನ್ನದೊಂದಿಗೆ 319 ಪದಕಗಳನ್ನು ಗಳಿಸಿದ ಚೀನಾ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸಿದರೆ, ದಕ್ಷಿಣ ಕೊರಿಯಾ 53 ಚಿನ್ನದೊಂದಿಗೆ 125 ಪದಕ ಗೆದ್ದು ಎರಡನೇ ಸ್ಥಾನ ತನ್ನದಾಗಿಸಿಕೊಂಡಿತು. ಮೂರನೇ ಸ್ಥಾನ ಗಳಿಸಿದ ಇರಾನ್‌ 51 ಚಿನ್ನ, 42 ಬೆಳ್ಳಿ ಮತ್ತು 43 ಕಂಚು ಗೆದ್ದಿತು. ಪಟ್ಟಿಯಲ್ಲಿ ಭಾರತ ಒಂಬತ್ತನೇ ಸ್ಥಾನ ಹೊಂದಿದೆ. ಕಳೆದ ಬಾರಿ ಭಾರತ 3 ಚಿನ್ನ, 14 ಬೆಳ್ಳಿ ಮತ್ತು 16 ಕಂಚು ಗಳಿಸಿತ್ತು.

ಕೊನೆಯ ದಿನವಾದ ಶನಿವಾರ ಎಸ್‌ಎಲ್‌3 ವಿಭಾಗದ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಪ್ರಮೋದ್ ಭಗತ್‌ ಚಿನ್ನ ಗೆದ್ದರು. ಇಂಡೊನೇಷ್ಯಾದ ಉಕುನ್‌ ರಕೇಂಡಿ ವಿರುದ್ಧ ಅವರು 21–19, 15–21, 21–14ರಿಂದ ಜಯ ಸಾಧಿಸಿದರು. ಎಸ್‌ಎಲ್‌4 ವಿಭಾಗದಲ್ಲಿ ತರುಣ್‌ 21–16, 21–6ರಿಂದ ಚೀನಾದ ಯುಯಾಂಗ್ ಗೋ ಎದುರು ಗೆದ್ದು ಚಿನ್ನದ ಪದಕ ತಮ್ಮದಾಗಿಸಿಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.