ಆರ್ಚರಿ
ಶಾಂಘೈ: ಭಾರತದ ಪುರುಷರ ಮತ್ತು ಮಹಿಳಾ ರಿಕರ್ವ್ ತಂಡಗಳು, ಇಲ್ಲಿ ನಡೆಯುತ್ತಿರುವ್ ವಿಶ್ವ ಕಪ್ ಸ್ಟೇಜ್ 2 ಆರ್ಚರಿ ಟೂರ್ನಿಯಲ್ಲಿ ಪದಕದ ಸುತ್ತಿನಿಂದ ಗುರುವಾರ ಹೊರಬಿದ್ದಿವೆ. ಪುರುಷರ ತಂಡ ನಾಲ್ಕನೇ ಸ್ಥಾನ ಪಡೆದರೆ, ಮಹಿಳೆಯರ ತಂಡ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಹೊರಬಿದ್ದಿದೆ.
ಧೀರಜ್ ಬೊಮ್ಮದೇವರ, ಅತನು ದಾಸ್ ಮತ್ತು ತರುಣದೀಪ್ ರೈ ಅವರನ್ನು ಒಳಗೊಂಡ ಏಳನೇ ಶ್ರೇಯಾಂಕದ ಪುರುಷರ ತಂಡ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಅಮೆರಿಕ ತಂಡದ (ಕ್ರಿಸ್ಟಿಯನ್ ಸ್ಟೊಡಾರ್ಡ್, ಬ್ರಾಡಿ ಎಲಿಸನ್, ಜಾಕ್ ವಿಲಿಯಮ್ಸ್) ಎದುರು 3–5 ರಿಂದ ಸೋಲನುಭವಿಸಿತು. ಭಾರತ 56–57ರ ಅಲ್ಪಅಂತರದಲ್ಲಿ ಮೊದಲ ಸೆಟ್ ಸೋತಿತು.
ಇದಕ್ಕೆ ಮೊದಲು ಭಾರತ ತೀವ್ರ ಹೋರಾಟ ಕಂಡ ಸೆಮಿಫೈನಲ್‌ನಲ್ಲಿ ಫ್ರಾನ್ಸ್ ಎದುರು 4–5 (25–26) ರಲ್ಲಿ ಸೋಲನುಭವಿಸಿ, ಕಂಚಿನ ಪದಕದ ಹಣಾಹಣಿಗೆ ಸೀಮಿತಗೊಂಡಿತ್ತು.
ಮಹಿಳೆಯರ ವಿಭಾಗದಲ್ಲಿ ದೀಪಿಕಾ ಕುಮಾರಿ, ಅಂಕಿತಾ ಭಕತ್ ಮತ್ತು ಅನ್ಶಿಕಾ ಕುಮಾರಿ ಅವರನ್ನು ಒಳಗೊಂಡ ತಂಡ ಕ್ವಾಲಿಫಿಕೇಷನ್ ಹಂತದಲ್ಲಿ ಮೂರನೇ ಸ್ಥಾನ ಗಳಿಸಿ ಭರವಸೆ ಮೂಡಿಸಿತ್ತು. ಆದರೆ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ 14ನೇ ಶ್ರೇಯಾಂಕದ ಮೆಕ್ಸಿಕೊ ತಂಡದ ಎದುರು 4–5 ರಲ್ಲಿ (26–27) ಸೋಲನುಭವಿಸಿತು.
ಬುಧವಾರ, ಅಗ್ರ ಕ್ರಮಾಂಕದ ಭಾರತದ ಪುರುಷರ ಮತ್ತು ಮಹಿಳೆಯರ ತಂಡಗಳು ಕಾಂಪೌಂಡ್ ವಿಭಾಗದ ಫೈನಲ್ ತಲುಪಿದ್ದವು. ಭಾರತ ಶನಿವಾರ ನಡೆಯುವ ಫೈನಲ್‌ನ ಎರಡೂ ವಿಭಾಗಗಳಲ್ಲಿ ಮೆಕ್ಸಿಕೊ ತಂಡವನ್ನು ಎದುರಿಸಲಿದೆ.
ಭಾರತ ರಿಕರ್ವ್ ವಿಭಾಗದಲ್ಲಿ ಎಡವುತ್ತಿದ್ದು, 2028ರ ಲಾಸ್ ಏಂಜಲೀಸ್‌ಗೆ ಮೊದಲು ಈ ತಂಡದ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕಾದ ತುರ್ತು ಎದುರಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.