ಅರ್ಚನಾ ಜಾಧವ್
ನವದೆಹಲಿ: ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ದೂರ ಅಂತರದ ಓಟಗಾರ್ತಿ ಅರ್ಚನಾ ಜಾಧವ್ ಅವರ ಮೇಲೆ ವಿಶ್ವ ಅಥ್ಲೆಟಿಕ್ಸ್ ಮಂಗಳವಾರ ನಾಲ್ಕು ವರ್ಷಗಳ ನಿಷೇಧ ಹೇರಿದೆ.
ಜನವರಿಯಲ್ಲಿ ನಡೆದ ಮದ್ದು ಪರೀಕ್ಷೆ ಫಲಿತಾಂಶದ ವಿರುದ್ಧ ಅವರಿಗೆ ನೆನಪೋಲೆ ಕಳುಹಿಸಿದರೂ, ಅರ್ಚನಾ ಮೇಲ್ಮನವಿ ಸಲ್ಲಿಸದ ಕಾರಣ ವಿಶ್ವ ಅಥ್ಲೆಟಿಕ್ಸ್ ಅವರನ್ನು ದೋಷಿ ಎಂದು ಪರಿಗಣಿಸಿದೆ.
2024ರ ಡಿಸೆಂಬರ್‌ನಲ್ಲಿ ಪುಣೆಯ ಹಾಫ್ ಮ್ಯಾರಥಾನ್ ವೇಳೆ ಅವರಿಂದ ಮಾದರಿ ಸಂಗ್ರಹಿಸಲಾಗಿತ್ತು. ಪರೀಕ್ಷೆಯಲ್ಲಿ ಅವರು ನಿಷೇಧಿತ ಮದ್ದು ಆಕ್ಸಂಡ್ರೊಲೊನ್ ಸೇವನೆ ಮಾಡಿದ್ದು ಪತ್ತೆಯಾಗಿತ್ತು. ಈ ಸಿಂಥೆಟಿಕ್ ಅನಬಾಲಿಕ್ ಸ್ಟಿರಾಯಿಡ್ ದೇಹದಲ್ಲಿ ಪ್ರೊಟಿನ್ ಅಂಶ ಹೆಚ್ಚಿಸುತ್ತದೆ ಮತ್ತು ಸ್ನಾಯುವರ್ಧಕವಾಗಿ ಕೆಲಸ ಮಾಡುತ್ತದೆ ಎಂದು ವಿಶ್ವ ಅಥ್ಲೆಟಿಕ್ಸ್‌ನ ಅಥ್ಲೀಟ್ಸ್ ಇಂಟೆಗ್ರಿಟಿ ಯೂನಿಟ್ (ಎಐಯು) ತಿಳಿಸಿದೆ.
ಜನವರಿ 7ರಿಂದಲೇ ಈ ನಿಷೇಧ ಜಾರಿಗೆ ಬಂದಿದೆ. ಅದಕ್ಕೆ ಮೊದಲು ಅವರ ಮೇಲೆ ತಾತ್ಕಾಲಿಕ ನಿಷೇಧ ಹೇರಲಾಗಿತ್ತು. ಉಲ್ಲಂಘನೆಗೆ ಸಂಬಂಧಿಸಿ ಫೆ. 25ರಂದು ಎಐಯುಗೆ ಇ–ಮೇಲ್ ಮೂಲಕ ಪ್ರತಿಕ್ರಿಯಿಸಿರುವ ಅರ್ಚನಾ ಅವರು ‘ನನ್ನನ್ನು ಕ್ಷಮಿಸಿ. ನಿಮ್ಮ ನಿರ್ಧಾರ ಸ್ವಾಗತಿಸುವೆ’ ಎಂದು ಉತ್ತರಿಸಿದ್ದಾರೆ.
‘ಈ ಸಂದೇಶದ ಪ್ರಕಾರ ಅವರು ವಿಚಾರಣೆಗೆ ಹಾಜರಿರಬೇಕಾದ ಅಗತ್ಯವಿಲ್ಲ. ಅವರು ಎಐಯು ನಿರ್ಧಾರಕ್ಕೆ ಬದ್ಧರಾಗಿದ್ದಾರೆ ಎಂದು ಅರ್ಥೈಸಿಕೊಂಡಿರುವುದಾಗಿ’ ಎಐಯು ತಿಳಿಸಿದೆ. ತಪ್ಪನ್ನು ಒಪ್ಪಿಕೊಳ್ಳಲು ಮಾರ್ಚ್ 3ರವರೆಗೆ ಅವರಿಗೆ ಕಾಲಾವಕಾಶ ನೀಡಲಾಗಿತ್ತು.
2024ರ ಅಕ್ಟೋಬರ್‌ನಲ್ಲಿ ನಡೆದ ಡೆಲ್ಲಿ ಹಾಫ್ ಮ್ಯಾರಥಾನ್‌ನ ಭಾರತದ ಮಹಿಳೆಯರ ಎಲೀಟ್ ರೇಸ್‌ನಲ್ಲಿ ಪಾಲ್ಗೊಂಡಿದ್ದ ಅರ್ಚನಾ 1ಗಂ.20.21 ನಿಮಿಷಗಳಲ್ಲಿ ಸ್ಪರ್ಧೆ ಪೂರೈಸಿ ನಾಲ್ಕನೇ ಸ್ಥಾನ ಗಳಿಸಿದ್ದರು. ಲಿಲಿ ದಾಸ್, ಕವಿತಾ ಯಾದವ್ ಮತ್ತು ಪ್ರೀತಿ ಲಂಬಾ ಕ್ರಮವಾಗಿ ಮೊದಲ ಮೂರು ಸ್ಥಾನ ಗಳಿಸಿದ್ದರು. 10,000 ಮೀ. ಓಟದಲ್ಲಿ ಅವರ ವೈಯಕ್ತಿಕ ಶ್ರೇಷ್ಠ ಸಾಧನೆ 35ನಿ.44.26 ಸೆ. ಹಾಫ್ ಮ್ಯಾರಥಾನ್‌ನಲ್ಲಿ 1ಗಂ.20.21ಸೆ. 3,000 ಮೀ. ಓಟದಲ್ಲಿ ಅವರ ಉತ್ತಮ ಅವಧಿ 10ನಿ.28.82 ಸೆ. ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.