ADVERTISEMENT

ನೀಗುವುದೇ ಭಾರತದ ಪ್ರಶಸ್ತಿ ಬರ?

ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಸಿಂಧು, ಸೈನಾ, ಶ್ರೀಕಾಂತ್‌ ಮೇಲೆ ಭರವಸೆ

ಪಿಟಿಐ
Published 5 ಮಾರ್ಚ್ 2019, 19:37 IST
Last Updated 5 ಮಾರ್ಚ್ 2019, 19:37 IST
ಸೈನಾ ನೆಹ್ವಾಲ್‌ –ಪಿಟಿಐ ಚಿತ್ರ
ಸೈನಾ ನೆಹ್ವಾಲ್‌ –ಪಿಟಿಐ ಚಿತ್ರ   

ಬರ್ಮಿಂಗ್‌ಹ್ಯಾಂ : ಒಂದೂವರೆ ದಶಕದ ಕಾಯುವಿಕೆ ಕೊನೆಗೊಳ್ಳುವುದೇ..? ಪಿ.ವಿ.ಸಿಂಧು, ಸೈನಾ ನೆಹ್ವಾಲ್ ಮತ್ತು ಕಿದಂಬಿ ಶ್ರೀಕಾಂತ್ ಭಾರತಕ್ಕೆ ಪ್ರಶಸ್ತಿ ಗೆದ್ದುಕೊಡುವರೇ...? ಬುಧವಾರ ಇಲ್ಲಿ ಆರಂಭವಾಗಲಿರುವ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಸಂದರ್ಭದಲ್ಲಿ ಭಾರತದ ಬ್ಯಾಡ್ಮಿಂಟನ್ ಪ್ರಿಯರನ್ನು ಕಾಡಲಿರುವ ಪ್ರಶ್ನೆಗಳು ಇವು.

ಭಾರತ ತಂಡದ ಈಗಿನ ಕೋಚ್‌ ಮತ್ತು ಸಿಂಧು, ಸೈನಾ, ಶ್ರೀಕಾಂತ್ ಅವರನ್ನು ಬೆಳೆಸಿದ ಪುಲ್ಲೇಲ ಗೋಪಿಚಂದ್‌ ಅವರು 2001ರಲ್ಲಿ ಪ್ರಶಸ್ತಿ ಗಳಿಸಿದ ನಂತರ ಭಾರತದ ಯಾರಿಗೂ ಈ ಚಾಂಪಿಯನ್‌ಷಿಪ್‌ನಲ್ಲಿ ಯಶಸ್ಸು ಗಳಿಸಲು ಆಗಲಿಲ್ಲ. ನಾಲ್ಕು ವರ್ಷಗಳ ಹಿಂದೆ ಸೈನಾ ಫೈನಲ್ ಪ್ರವೇಶಿಸಿದ್ದರು. ಆದರೆ ಕ್ಯಾರೊಲಿನಾ ಮರಿನ್‌ ಎದುರು ಸೋತಿದ್ದರು. ಕಳೆದ ವರ್ಷ ಸಿಂಧು ಸೆಮಿಫೈನಲ್‌ ಪ್ರವೇಶಿಸಿದ್ದರು.

ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ನ ರ‍್ಯಾಂಕಿಂಗ್‌ನಲ್ಲಿ ಅಗ್ರ 32 ಸ್ಥಾನಗಳನ್ನು ಹೊಂದಿರುವವರು ಈ ವರ್ಷದ ಟೂರ್ನಿಗೆ ಅರ್ಹತೆ ಗಳಿಸಿದ್ದಾರೆ. ಇವರ ಪೈಕಿ ಸಿಂಧು ಐದನೇ ಶ್ರೇಯಾಂಕ ಹೊಂದಿದ್ದು ಶ್ರೀಕಾಂತ್ ಏಳು ಮತ್ತು ಸೈನಾ ಎಂಟನೇ ಶ್ರೇಯಾಂಕದಲ್ಲಿದ್ದಾರೆ.

ADVERTISEMENT

ಸಿಂಧು ಮೊದಲ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಸಂಗ್‌ ಜಿ ಹ್ಯೂನ್ ಎದುರು ಸೆಣಸಲಿದ್ದಾರೆ. ಸೈನಾಗೆ ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್‌ನ ಕ್ರಿಸ್ಟಿ ಗಿಲ್ಮೊರ್ ಎದುರಾಳಿ. ಈ ಹಿಂದೆ 14 ಬಾರಿ ಮುಖಾಮುಖಿಯಾಗಿದ್ದಾಗ ಸಿಂಧು ಎಂಟು ಬಾರಿ ಸಂಗ್‌ ಜಿ ಅವರನ್ನು ಮಣಿಸಿದ್ದರು. ಆದರೆ ಕಳೆದ ವರ್ಷ ನಡೆದ ಮೂರು ಪಂದ್ಯಗಳಲ್ಲಿ ಎರಡನ್ನು ಸಂಗ್‌ ಜಿ ಗೆದ್ದಿದ್ದಾರೆ. ಸೈನಾ ಮತ್ತು ಗಿಲ್ಮೊರ್ ಒಟ್ಟು ಆರು ಬಾರಿ ಎದುರಾಗಿದ್ದಾರೆ. ಪ್ರತಿ ಬಾರಿಯೂ ಸೈನಾ ವಿಜಯಶಾಲಿಯಾಗಿದ್ದಾರೆ.

ಕಳೆದ ವರ್ಷ ಸಿಂಧು ಮತ್ತು ಸೈನಾ ಮಿಶ್ರ ಫಲ ಕಂಡಿದ್ದು ಈಗ ಲಯಕ್ಕೆ ಮರಳಿದ್ದಾರೆ. ಸೈನಾ ಈ ವರ್ಷದ ಆರಂಭದಲ್ಲಿ ನಡೆದಿದ್ದ ಇಂಡೊನೇಷ್ಯಾ ಮಾಸ್ಟರ್ಸ್ ಟೂರ್ನಿಯ ಪ್ರಶಸ್ತಿ ಗೆದ್ದು ಭರವಸೆ ಹೆಚ್ಚಿಸಿಕೊಂಡಿದ್ದಾರೆ.

ಸಮೀರ್ ವರ್ಮಾಗೆ ಕಠಿಣ ಸವಾಲು:ಕಿದಂಬಿ ಶ್ರೀಕಾಂತ್‌ ಮೊದಲ ಸುತ್ತಿನಲ್ಲಿ ಸುಲಭ ಜಯದ ನಿರೀಕ್ಷೆಯಲ್ಲಿದ್ದಾರೆ. ಮೊದಲ ಪಂದ್ಯದಲ್ಲಿ ಅವರು ಫ್ರಾನ್ಸ್‌ನ ಬ್ರೈಸ್ ಲೆವೆರ್ಡೆಸ್‌ ಎದುರು ಸೆಣಸಲಿದ್ದಾರೆ. ಆದರೆ ಸಮೀರ್ ವರ್ಮಾಗೆ ಆರಂಭದಲ್ಲೇ ಭಾರಿ ಸವಾಲು ಎದುರಾಗಿದೆ. ಮೊದಲ ಸುತ್ತಿನಲ್ಲಿ ಅವರಿಗೆ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸನ್‌ ಎದುರಾಳಿಯಾಗಿದ್ದಾರೆ.

ಕಳೆದ ವರ್ಷ ಶ್ರೀಕಾಂತ್ ಪಾಲಿಗೆ ನೀರಸವಾಗಿತ್ತು. ಆದರೆ ಈ ವರ್ಷದ ಆರಂಭದಲ್ಲಿ ಮಲೇಷ್ಯಾ ಮತ್ತು ಇಂಡೊನೇಷ್ಯಾ ಓಪನ್‌ನ ಕ್ವಾರ್ಟರ್ ಫೈನಲ್‌ ಪ್ರವೇಶಿಸಿ ನಿರೀಕ್ಷೆ ಮೂಡಿಸಿದ್ದಾರೆ. ಕಳೆದ ಬಾರಿ ವಿಶ್ವ ಟೂರ್‌ನ ಫೈನಲ್‌ಗೆ ಲಗ್ಗೆ ಇರಿಸಿದ್ದ ಸಮೀರ್ ವರ್ಮಾ ಆಲ್‌ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಬಾರಿ ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಬಿ.ಸಾಯಿ ಪ್ರಣೀತ್ ಮತ್ತು ಎಚ್‌.ಎಸ್‌.ಪ್ರಣಯ್‌ ಮೊದಲ ಸುತ್ತಿನಲ್ಲಿ ಮುಖಾಮುಖಿಯಾಗಲಿದ್ದು ಒಬ್ಬರು ಹೊರನಡೆಯಬೇಕಾದದ್ದು ಅನಿವಾರ್ಯ.

ಮೂರು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಕ್ಯಾರೊಲಿನಾ ಮರಿನ್‌ ಮೇಲೆ ಎಲ್ಲರು ಕಣ್ಣು ನೆಟ್ಟಿದ್ದಾರೆ. ಆದರೆ ಇಂಡೊನೇಷ್ಯಾ ಮಾಸ್ಟರ್ಸ್‌ನ ಫೈನಲ್‌ನಲ್ಲಿ ಗಾಯಗೊಂಡು ಮರಳಿದ ಅವರು ಇನ್ನೂ ಪೂರ್ಣವಾಗಿ ಚೇತರಿಸಿಕೊಳ್ಳದೇ ಇರುವುದು ಆತಂಕಕ್ಕೆ ಕಾರಣವಾಗಿದೆ.

ಅಶ್ವಿನಿ–ಸಿಕ್ಕಿ ರೆಡ್ಡಿ ಸವಾಲು: ಮಹಿಳೆಯರ ಡಬಲ್ಸ್‌ನಲ್ಲಿ ಭಾರತದ ಜೋಡಿ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ ಭರವಸೆ ಮೂಡಿಸಿದ್ದಾರೆ. ಮೊದಲ ಸುತ್ತಿನಲ್ಲಿ ಅವರು ಏಳನೇ ಶ್ರೇಯಾಂಕದ ಜಪಾನ್ ಜೋಡಿ ಶಿಹೊ ಟನಾಕ ಮತ್ತು ಕೊಹರು ಯೊನೆಮೊಟೊ ಅವರನ್ನು ಎದುರಿಸುವರು. ಮೇಘನಾ ಜಕ್ಕಂಪುಡಿ ಮತ್ತು ಪುರ್ವಿಷಾ ರಾಮ್‌ ರಷ್ಯಾದ ಎಕಟೇರಿನಾ ಬೊಲೊಟೊವಾ ಮತ್ತು ಅಲಿನಾ ದವ್ಲೆತೊವಾ ಎದುರು ಆಡುವರು.

ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ ಮತ್ತು ಸುಮೀತ್ ರೆಡ್ಡಿ ಚೀನಾದ ಒವು ಕ್ಸಾನಿ ಮತ್ತು ರೆನ್‌ ಕ್ಸಿಯಾಂಗ್ಯು ಅವರನ್ನು ಎದುರಿಸುವರು.

***

ಪ್ರತಿ ಪಂದ್ಯವೂ ಸವಾಲಿನದ್ದು. ಹೀಗಾಗಿ ಪ್ರತಿ ಪಾಯಿಂಟ್ ಮೇಲೆ ಗಮನ ಇರಿಸಬೇಕಾಗಿದೆ. ಮೊದಲ ಪಂದ್ಯದಲ್ಲಿ ಗೆದ್ದು ಮುಂದೆ ಸಾಗುವುದಕ್ಕೆ ಮೊದಲ ಆದ್ಯತೆ.

–ಪಿ.ವಿ.ಸಿಂಧು, ಭಾರತದ ಆಟಗಾರ್ತಿ

ಸಿಂಧು, ಸೈನಾ ಮತ್ತು ಶ್ರೀಕಾಂತ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಈ ವರ್ಷದ ಚಾಂಪಿಯನ್‌ಷಿಪ್‌ನಲ್ಲಿ ಇವರೆಲ್ಲರೂ ಉತ್ತಮ ಸಾಧನೆ ಮಾಡುವ ಭರವಸೆ ಇದೆ.

–ಪುಲ್ಲೇಲ ಗೋಪಿಚಂದ್‌, ಭಾರತದ ಕೋಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.