ADVERTISEMENT

ಭಾರತಕ್ಕೆ ಮರಳಿದ ಬ್ಯಾಡ್ಮಿಂಟನ್‌ ಆಟಗಾರರು

ಪಿಟಿಐ
Published 3 ನವೆಂಬರ್ 2020, 12:00 IST
Last Updated 3 ನವೆಂಬರ್ 2020, 12:00 IST
ಲಕ್ಷ್ಯ ಸೇನ್‌
ಲಕ್ಷ್ಯ ಸೇನ್‌   

ನವದೆಹಲಿ: ಕೋವಿಡ್‌–19 ಪಿಡುಗಿನ ಆತಂಕದಿಂದ ಜರ್ಮನಿಯ ಸಾರ್‌ಲೊರ್‌ಲಕ್ಷ್‌ ಬ್ಯಾಡ್ಮಿಂಟನ್ ಟೂರ್ನಿಯಿಂದ ಹಿಂದೆ ಸರಿದು, ಅಲ್ಲಿಯೇ ಪ್ರತ್ಯೇಕವಾಸದಲ್ಲಿದ್ದ ಭಾರತ ತಂಡದ ಆಟಗಾರರು ಮಂಗಳವಾರ ತವರಿಗೆ ಮರಳಿದ್ದಾರೆ. ಎಲ್ಲರೂ ಜರ್ಮನಿಯಲ್ಲೇ ಪರೀಕ್ಷೆಗೆ ಒಳಗಾಗಿದ್ದು, ಯಾರಲ್ಲಿಯೂ ಸೋಂಕು ಪತ್ತೆಯಾಗಿರಲಿಲ್ಲ.

ತಮ್ಮ ತಂದೆ ಹಾಗೂ ಕೋಚ್‌ ಡಿ.ಕೆ.ಸೇನ್‌ ಅವರಲ್ಲಿ ಕೋವಿಡ್‌ ದೃಢಪಟ್ಟ ಕಾರಣ ಯುವ ಆಟಗಾರ ಲಕ್ಷ್ಯ ಸೇನ್‌ ಟೂರ್ನಿಯಿಂದ ಹಿಂದೆ ಸರಿದಿದ್ದರು. ಡಿ.ಕೆ.ಸೇನ್‌ ಅವರ ಸಂಪರ್ಕದ ಹಿನ್ನೆಲೆಯಲ್ಲಿ ಭಾರತದ ಇನ್ನಿಬ್ಬರು ಆಟಗಾರರಾದ ಅಜಯ್‌ ಜಯರಾಮ್‌ ಹಾಗೂ ಶುಭಂಕರ್‌ ಡೇ ಕೂಡ ಟೂರ್ನಿಯಲ್ಲಿ ಮುಂದುವರಿಯದಿರಲು ನಿರ್ಧರಿಸಿದ್ದರು.

ಲಕ್ಷ್ಯ, ಜಯರಾಮ್‌, ಡೇ ಹಾಗೂ ಫಿಸಿಯೊ ಅಭಿಷೇಕ್‌ ವಾಘ್ ಅವರು ಪರೀಕ್ಷೆಗೆ ಒಳಗಾಗಿದ್ದರು. ಕೊರೊನಾ ಸೋಂಕು ಪತ್ತೆಯಾಗಿರಲಿಲ್ಲ. ಆದರೂ ಇನ್ನೊಂದು ಪರೀಕ್ಷೆಯ ಫಲಿತಾಂಶ ಬರುವವರೆಗೆ ಎಲ್ಲರೂ ಐದು ದಿನಗಳ ಪ್ರತ್ಯೇಕವಾಸದ ಮೊರೆ ಹೋಗಿದ್ದರು.

ADVERTISEMENT

‘ಇಂದು ಬೆಳಗಿನ ಜಾವ ಐದು ಗಂಟೆಗೆ ನಾವು ಬೆಂಗಳೂರು ತಲುಪಿದ್ದೇವೆ. ಎಲ್ಲರೂ ಆರೋಗ್ಯವಾಗಿದ್ದೇವೆ‘ ಎಂದು ಡಿ.ಕೆ.ಸೇನ್‌ ಹೇಳಿದ್ದಾರೆ.

‘ನಾನು ಮೊದಲ ಬಾರಿ ಕೊರೊನಾ ಸೋಂಕು ಪರೀಕ್ಷೆಗೆ ಒಳಗಾದ ಬಳಿಕ ನಾವೆಲ್ಲರೂ ಕ್ವಾರಂಟೈನ್‌ನಲ್ಲಿದ್ದೆವು. ಜರ್ಮನಿಯ ಅಧಿಕಾರಿಗಳು ನವೆಂಬರ್ 1ರಂದು ನಮಗೆ ಎರಡನೇ ಬಾರಿ ಪರೀಕ್ಷೆ ನಡೆಸಿದರು. ಯಾರಲ್ಲಿಯೂ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. ಹೀಗಾಗಿ ನಾವು ಶೀಘ್ರವೇ ಭಾರತಕ್ಕೆ ಮರಳಿದೆವು‘ ಎಂದು ಸೇನ್‌ ತಿಳಿಸಿದರು.

ಲಕ್ಷ್ಯ, ಡಿ.ಕೆ.ಸೇನ್‌ ಹಾಗೂ ಫಿಸಿಯೊ ಬೆಂಗಳೂರಿಗೆ ಬಂದಿಳಿದರೆ, ಡೇ, ಜಯರಾಮ್ ಅವರು ಫ್ರಾಂಕ್‌ಫರ್ಟ್‌ನಿಂದ ನೇರ ದೆಹಲಿ ತಲುಪಿದರು.

ಮುಂದಿನ ವರ್ಷದ ಜನವರಿಯಲ್ಲಿ ನಡೆಯಲಿರುವ ಏಷ್ಯನ್ ಟೂರ್ನಿ ಹಾಗೂ ವಿಶ್ವ ಟೂರ್ ಫೈನಲ್ಸ್‌ಗಳಿಗೆ ಭಾರತದ ಆಟಗಾರರು ಸಜ್ಜಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.