ADVERTISEMENT

ಭಾರತೀಯ ಶೈಲಿ ಕುಸ್ತಿ ಸಂಸ್ಥೆಗೆ ಫೆಡರೇಷನ್ ಮಾನ್ಯತೆ

ಪಿಟಿಐ
Published 21 ಮಾರ್ಚ್ 2021, 11:49 IST
Last Updated 21 ಮಾರ್ಚ್ 2021, 11:49 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಭಾರತೀಯ ಶೈಲಿಯ ಕುಸ್ತಿ ಸಂಸ್ಥೆಗೆ (ಐಎಸ್‌ಡಬ್ಲ್ಯುಎಐ) ಕೇಂದ್ರ ಕ್ರೀಡಾ ಸಚಿವಾಲಯವು ಶನಿವಾರ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ (ಎನ್‌ಎಸ್‌ಎಫ್‌) ಮಾನ್ಯತೆ ನೀಡಿದೆ. ಇದರೊಂದಿಗೆ ಸರ್ಕಾರದಿಂದ ಅನುದಾನ ಹಾಗೂ ನೆರವನ್ನು ಪಡೆಯಲು ಸಂಸ್ಥೆಯು ಅರ್ಹತೆ ಗಳಿಸಿದೆ.

‘ಕ್ರೀಡಾ ಸಚಿವಾಲಯವು ನಮಗೆ ರಾಷ್ಟ್ರೀಯ ಫೆಡರೇಷನ್‌ ಮಾನ್ಯತೆ ನೀಡಿದ್ದು ಖುಷಿಯ ಸಂಗತಿ.ರೈಲ್ವೆ ಪ್ರಯಾಣದಲ್ಲಿ ರಿಯಾಯಿತಿ, ನೇಮಕಾತಿ ಸೇರಿದಂತೆ ಇತರ ಫೆಡರೇಷನ್‌ಗಳಿಗೆ ದೊರೆಯುವ ಹಲವು ಸವಲತ್ತುಗಳು ನಮ್ಮ ಸಂಸ್ಥೆಗೂ ಸಿಗಲಿವೆ. ಈ ಶೈಲಿಯಲ್ಲಿ ಪ್ರಮುಖ ಅಂತರಾಷ್ಟ್ರೀಯ ಕುಸ್ತಿಪಟುಗಳು ಸೆಣಸಬಹುದಾಗಿದೆ‘ ಎಂದು ಐಎಸ್‌ಡಬ್ಲ್ಯುಎಐ ಹೇಳಿದೆ.

‘ನಮ್ಮ ಚಟುವಟಿಕೆಗಳನ್ನು ವಿಸ್ತರಿಸುತ್ತಲೇ ಕ್ರೀಡಾ ಸಚಿವಾಲಯದ ಮಾನದಂಡಗಳು ಹಾಗೂ ನಿರೀಕ್ಷೆಗೆ ಅನುಗುಣವಾಗಿ ಕಾರ್ಯನಿರ್ವಹಿಸಲಿದ್ದೇವೆ‘ ಎಂದು ಐಎಸ್‌ಡಬ್ಲ್ಯುಎಐ ಪ್ರಧಾನ ಕಾರ್ಯದರ್ಶಿ ಗೌರವ್ ಸಚದೇವ್‌ ತಿಳಿಸಿದ್ದಾರೆ.

ADVERTISEMENT

2011ರ ಕ್ರೀಡಾ ಅಭಿವೃದ್ಧಿ ನೀತಿಯನ್ನು ಪಾಲಿಸಲು ವಿಫಲವಾದ ಹಿನ್ನೆಲೆಯಲ್ಲಿ, ಒಂದು ದಶಕದ ಬಳಿಕ ಐಎಸ್‌ಡಬ್ಲ್ಯುಎಐಗೆ ಫೆಡರೇಷನ್‌ ಮಾನ್ಯತೆ ದೊರೆತಿದೆ ಎಂದು ಮಾರ್ಚ್‌ 8ರಂದು ಹೊರಡಿಸಿದ ಆದೇಶದಲ್ಲಿ ಕ್ರೀಡಾ ಸಚಿವಾಲಯ ಉಲ್ಲೇಖಿಸಿದೆ. ಭಾರತೀಯ ಶೈಲಿಯ ಕುಸ್ತಿಯ ಬೆಳವಣಿಗೆಗಾಗಿ ಈ ಮಾನ್ಯತೆ ನೀಡಲಾಗಿದೆ.

‘2010ರಿಂದ ಕ್ರೀಡಾ ಫೆಡರೇಷನ್‌ ಹೊಸ ಮಾನ್ಯತೆ ನೀಡುವ ಯೋಜನೆಯನ್ನು ಪರಿಚಯಿಸಲಾಗಿತ್ತು. ಆದರೆ 2011ರ ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನೀತಿಯನ್ನು ಪಾಲಿಸದ ಕಾರಣ ಭಾರತೀಯ ಶೈಲಿಯ ಕುಸ್ತಿ ಸಂಸ್ಥೆಯ ಮಾನ್ಯತೆ ನವೀಕರಣ ಮಾಡಿರಲಿಲ್ಲ‘ ಎಂದು ಸರ್ಕಾರ ಹೊರಡಿಸಿರುವ ಪತ್ರದಲ್ಲಿ ಎಂದು ಕೇಂದ್ರ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಉಪ ಕಾರ್ಯದರ್ಶಿ ಎಸ್‌ಪಿಎಸ್‌ ತೋಮರ್ ತಿಳಿಸಿದ್ದಾರೆ.

ಐಎಸ್‌ಡಬ್ಲ್ಯುಎಐ 1958ರಲ್ಲಿ ಸ್ಥಾಪಿಸಲ್ಪಟ್ಟಿದೆ. 60 ವರ್ಷಗಳಿಂದ ಅಸ್ತಿತ್ವದಲ್ಲಿದೆ. ಭಾರತೀಯ ಶೈಲಿ ಕುಸ್ತಿಯು ಸಾಂಪ್ರದಾಯಿಕ ದೇಶಿ ಕ್ರೀಡೆಯಾಗಿದ್ದು, ಮಣ್ಣಿನ ಮೇಲೆ ಹಾಗೂ ಮ್ಯಾಟ್‌ಗಳ ಮೇಲೆ ಪೈಲ್ವಾನರು ಸೆಣಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.