ಅಂತಾಲ್ಯ (ಟರ್ಕಿ): ನಿರಾಶಾದಾಯಕ ನಿರ್ವಹಣೆ ತೋರಿದ ಭಾರತದ ಆರ್ಚರಿ ಪಟುಗಳು ಶನಿವಾರ ಮುಕ್ತಾಯಗೊಂಡ ಆರ್ಚರಿ ವಿಶ್ವಕಪ್ ಸ್ಟೇಜ್3 ಕೂಟದಲ್ಲಿ ಒಂದೂ ಪದಕ ಗೆಲ್ಲದೇ ಬರಿಗೈಯಲ್ಲಿ ಮರಳಿದರು. ಏಷ್ಯನ್ ಕ್ರೀಡೆಗಳಿಗೆ ಕೇವಲ ಒಂದು ವರ್ಷ ಉಳಿದಿರುವಂತೆ ಭಾರತ ತಂಡದ ಈ ಕಳಪೆ ಪ್ರದರ್ಶನವು, ತಂಡದ ಆಯ್ಕೆ, ಸಿದ್ಧತೆ, ಮನೋಬಲದ ಮೇಲೆ ಗಂಭೀರ ಪ್ರಶ್ನೆ ಮೂಡಿಸಿದೆ.
ಮೇ ತಿಂಗಳಲ್ಲಿ ಶಾಂಘೈನಲ್ಲಿ ನಡೆದ ವಿಶ್ವಕಪ್ ಸ್ಟೇಜ್ 2 ಕೂಟದಲ್ಲಿ ಭಾರತದ ಬಿಲ್ಗಾರರು ಎರಡು ಚಿನ್ನ, ಒಂದು ಬೆಳ್ಳಿ, ನಾಲ್ಕು ಕಂಚಿನ ಪದಕ ಗೆದ್ದುಕೊಂಡು ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದು ಗಮನಸೆಳೆದಿದ್ದರು. ಆದರೆ ಈಗ ಅದು ಗತವೈಭವದಂತೆ ಕಂಡಿದೆ.
ಅಂತ್ಯಾಲದಲ್ಲಿ ಕಳಪೆ ನಿರ್ವಹಣೆ ಅಚ್ಚರಿ ಮೂಡಿಸಿತು. ಭಾರತ ಪ್ರಬಲವಾಗಿರುವ ಕಾಂಪೌಂಡ್ ಆರ್ಚರಿಯಲ್ಲಿ ಒಂದೂ ಪದಕ ಬರಲಿಲ್ಲ.
ಶುಕ್ರವಾರ ವೈಯಕ್ತಿಕ ಮತ್ತು ಟೀಮ್ ವಿಭಾಗದಲ್ಲಿ ಕಾಂಪೌಂಡ್ ಆರ್ಚರಿ ಸ್ಪರ್ಧಿಗಳು ಹೊರಬಿದ್ದಿದ್ದರು. ನಂತರ ರಿಕರ್ವ್ ವಿಭಾಗದಲ್ಲೂ ನಿರಾಶೆ ಮುಂದುವರಿಯಿತು. ಅನುಭವಿ, ನಾಲ್ಕು ಬಾರಿಯ ಒಲಿಂಪಿಯನ್‌ಗಳಾದ ದೀಪಿಕಾ ಕುಮಾರಿ, ತರುಣದೀಪ್ ರೈ ಸಹ ಪದಕ ಸುತ್ತಿಗೇರಲು ವಿಫಲರಾದರು.
ಇದ್ದುದರಲ್ಲಿ ಸಮಾಧಾನ ಮೂಡಿಸಿದವರೆಂದರೆ ಸಿಮ್ರಣಜಿತ್ ಕೌರ್ ಅವರ ಆಟ. ಶನಿವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲುವ ಮೊದಲು ಒಲಿಂಪಿಕ್ ಸ್ವರ್ಣ ವಿಜೇತೆ ಅನ್ ಸಾನ್ ಅವರಿಗೆ ಶೂಟ್‌ಆಫ್‌ವರೆಗೆ ಪೈಪೋಟಿ ನೀಡಿದರು.
ದೀಪಿಕಾ, ಕೊರಿಯಾದ ಪ್ರಬಲ ಎದುರಾಳಿ ವಿರುದ್ಧ ಮತ್ತೊಮ್ಮೆ ನಿರಾಶೆ ಮೂಡಿಸಿದರು. ಅಂಕಿಯಾ ಭಕತ್ ಮೊದಲ ಸುತ್ತಿನಲ್ಲೇ ಹೊರಬಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.