
ಗೋಲೊಂದನ್ನು ಗಳಿಸಿದ ನಂತರ ಜರ್ಮನಿ ಆಟಗಾರರ ಸಂಭ್ರಮ...
ಪಿಟಿಐ ಚಿತ್ರ
ಚೆನ್ನೈ: ಹಾಲಿ ಚಾಂಪಿಯನ್, ಬಲಿಷ್ಠ ಜರ್ಮನಿ ತಂಡ ಭಾನುವಾರ 5–1 ಗೋಲುಗಳಿಂದ ಭಾರತ ತಂಡವನ್ನು ಸುಲಭವಾಗಿ ಸೋಲಿಸಿ ಐಎಚ್‌ಎಫ್ ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿಯ ಫೈನಲ್ ಪ್ರವೇಶಿಸಿತು. ಇದರೊಂದಿಗೆ 9 ವರ್ಷಗಳ ನಂತರ ತವರಿನಲ್ಲಿ ಪ್ರಶಸ್ತಿಯನ್ನು ಮರಳಿ ಪಡೆಯುವ ಆತಿಥೇಯ ತಂಡದ ಕನಸು ನುಚ್ಚುನೂರಾಯಿತು.
ಏಳು ಬಾರಿಯ ಚಾಂಪಿಯನ್ ಆಗಿರುವ ಜರ್ಮನಿ ಇದೇ 10ರಂದು (ಬುಧವಾರ) ನಡೆಯುವ ಫೈನಲ್‌ನಲ್ಲಿ ಸ್ಪೇನ್ ತಂಡವನ್ನು ಎದುರಿಸಲಿದೆ. ಸ್ಪೇನ್ ತಂಡವು ತೀವ್ರ ಹೋರಾಟ ಕಂಡ ಮೊದಲ ಸೆಮಿಫೈನಲ್‌ನಲ್ಲಿ ಎರಡು ಬಾರಿಯ ಚಾಂಪಿಯನ್ ಅರ್ಜೆಂಟೀನಾ ತಂಡವನ್ನು 2–1 ಗೋಲುಗಳಿಂದ ಸೋಲಿಸಿತು. ಸ್ಪೇನ್ ಇದೇ ಮೊದಲ ಬಾರಿಗೆ ಜೂನಿಯರ್ ವಿಶ್ವಕಪ್ ಫೈನಲ್ ಪ್ರವೇಶಿಸಿದೆ.
ಜರ್ಮನಿ ತಂಡದ ಪರ ಲುಕಾಸ್ ಕೊಸೆಲ್ (14 ಮತ್ತು 30ನೇ ನಿಮಿಷ), ಟೈಟಸ್ ವೆಕ್ಸ್ (15ನೇ ನಿಮಿಷ), ಯೋನಾಸ್ ವಾನ್ ಗೆರ್ಸುಮ್ (40ನೇ ನಿಮಿಷ) ಮತ್ತು ಬೆನ್ ಹಾಸ್‌ಬ್ಯಾಚ್ (49ನೇ ನಿಮಿಷ) ಗೋಲುಗಳನ್ನು ಗಳಿಸಿದರು.
ಭಾರತ ತಂಡವು ಕೊನೆಯ ಕ್ವಾರ್ಟರ್‌ನಲ್ಲಿ (51ನೇ ನಿ.) ಅನ್ಮೋಲ್ ಎಕ್ಕಾ ಪೆನಾಲ್ಟಿ ಕಾರ್ನರ್‌ನಲ್ಲಿ ಗಳಿಸಿದ ಗೋಲಿನಿಂದ ಸೋಲಿನ ಅಂತರ ಕಡಿಮೆ ಮಾಡುವಷ್ಟಕ್ಕೇ ತೃಪ್ತಿಪಡಬೇಕಾಯಿತು.
2016ರಲ್ಲಿ ಲಖನೌದಲ್ಲಿ ನಡೆದ ಕೂಟದಲ್ಲಿ ಭಾರತ ಕೊನೆಯ ಬಾರಿ ಚಾಂಪಿಯನ್ ಆಗಿತ್ತು. ಈಗ ಆತಿಥೇಯರು ಬುಧವಾರ ಕಂಚಿನ ಪದಕಕ್ಕಾಗಿ ನಡೆಯುವ ಸೆಣಸಾಟದಲ್ಲಿ ಅರ್ಜೆಂಟೀನಾ ತಂಡವನ್ನು
ಎದುರಿಸಲಿದ್ದಾರೆ.
ಭಾರತ ಸಕಾರಾತ್ಮಕವಾಗಿ ಆಟ ಆರಂಭಿಸಿತು. ಆದರೆ ಕೆಲವೇ ನಿಮಿಷಗಳಲ್ಲಿ ಲಯಕಂಡುಕೊಂಡ ಜರ್ಮನಿ ಆಟದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿತು. ಹೀಗಾಗಿ ಜರ್ಮನಿ ತಂಡಕ್ಕೇ ಹೆಚ್ಚಿನ ಅವಕಾಶಗಳು ಒಲಿದವು. 13ನೇ ನಿಮಿಷ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲಿನತ್ತ ಹೊಡೆದ ಚೆಂಡು ಭಾರತದ ರಕ್ಷಣೆ ಆಟಗಾರನಿಗೆ ತಾಗಿತು. ಹೀಗಾಗಿ ದೊರೆತ ‘ಸ್ಟ್ರೋಕ್’ ಅವಕಾಶವನ್ನು ಲುಕಾಸ್ ಕೊಸೆಲ್ ಗೋಲಾಗಿ
ಪರಿವರ್ತಿಸಿದರು.
ಈ ಮುನ್ನಡೆಯಿಂದ ವಿಶ್ವಾಸ ಪಡೆದ ಜರ್ಮನಿ, ಭಾರತ ತಂಡದ ಮೇಲೆ ನಿರಂತರ ಒತ್ತಡ ಹೇರಿತು. ಮೊದಲ ಕ್ವಾರ್ಟರ್ ಇನ್ನೇನು ಮುಗಿಯಿತು
ಎನ್ನುವಷ್ಟರಲ್ಲಿ ಜರ್ಮನಿ ಮುನ್ನಡೆ ಹೆಚ್ಚಿಸಿತು. ವಿರಾಮದ ವೇಳೆ ತಂಡ 3–0 ಮುನ್ನಡೆ ಸಂಪಾದಿಸಿತ್ತು.
ಸ್ಪೇನ್‌ಗೆ ಜಯ:
ಮೊದಲ ಸೆಮಿಫೈನಲ್‌ನಲ್ಲಿ ಸ್ಪೇನ್ ತಂಡದ ಪರ ಮಾರಿಯೊ ಮೆನಾ (7ನೇ ನಿಮಿಷ), ಆಲ್ಬರ್ಟ್ ಸೆರ್ರಾಹಿಮಾ (56ನೇ ನಿಮಿ) ಅವರು ಗೋಲು ಗಳಿಸಿದರೆ, ಜುವಾನ್ ಫರ್ನಾಂಡಿಸ್ (21ನೇ ನಿಮಿಷ) ಅವರು ಅರ್ಜೆಂಟೀನಾ ತಂಡಕ್ಕೆ ಏಕೈಕ ಗೋಲನ್ನು ತಂದಿತ್ತರು.
ಬೆಲ್ಜಿಯಂ ತಂಡ 3–2 ಗೋಲುಗಳಿಂದ ಫ್ರಾನ್ಸ್ ತಂಡವನ್ನು ಸೋಲಿಸಿ ಐದು– ಆರನೇ ಸ್ಥಾನಕ್ಕೆ ನಡೆಯುವ ಕ್ಲಾಸಿಫಿಕೇಷನ್ ಪಂದ್ಯದಲ್ಲಿ ಆಡುವ ಅರ್ಹತೆ ಪಡೆಯಿತು. ನ್ಯೂಜಿಲೆಂಡ್ ತಂಡ 7–8ನೇ ಸ್ಥಾನಕ್ಕೆ ನಡೆಯುವ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು ಎದುರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.