ಬೆಂಗಳೂರು: ಕರ್ನಾಟಕದ ಯುವ ರೇಸರ್ ಪ್ರಗತಿ ಗೌಡ ಅವರು ಪ್ಯಾರಿಸ್‌ನಲ್ಲಿ ನಡೆದ ‘ರ‍್ಯಾಲಿ ಡೆಸ್ ವ್ಯಾಲೀಸ್–2024’ ಟೂರ್ನಿಯಲ್ಲಿ ಮೂರನೇ ಸ್ಥಾನ ಪಡೆದರು.
ಈ ಮೂಲಕ ಅಂತರರಾಷ್ಟ್ರೀಯ ರ‍್ಯಾಲಿಯ ಚೊಚ್ಚಲ ಪ್ರಯತ್ನದಲ್ಲೇ ಪೋಡಿಯಂ ಫಿನಿಷ್ ಮಾಡಿದ ಭಾರತದ ಮೊದಲ ರೇಸರ್ ಎಂಬ ಹೆಗ್ಗಳಿಕೆಗೆ ಪಾತ್ರವಾದರು.
ಪುರುಷ ರೇಸರ್‌ಗಳೊಂದಿಗೆ ಸ್ಪರ್ಧಿಸಿದ 26 ವರ್ಷ ವಯಸ್ಸಿನ ಪ್ರಗತಿ, ರ‍್ಯಾಲಿ–5 ಕಾರ್ ವಿಭಾಗದ ಸ್ಪರ್ಧೆಯಲ್ಲಿ 23 ನಿಮಿಷ 51.8 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಫ್ರಾನ್ಸ್‌ನ ಹಾಲಿ ರಾಷ್ಟ್ರೀಯ ಚಾಂಪಿಯನ್ ಯೋನ್ ಕಾರ್ಬೆರಾಂಡ್ ಅವರು ಹ್ಯಾಮೆಲ್ ಜೂಲಿಯೆಟ್ ಜೊತೆ (21:34.2) ಇದೇ ವಿಭಾಗದಲ್ಲಿ ಮೊದಲ ಸ್ಥಾನ ಪಡೆದರು.
ಯುರೋಪ್‌ನಲ್ಲಿ ಮೂರು ತಿಂಗಳ ಕಠಿಣ ತರಬೇತಿ ಪಡೆದ ಬಳಿಕ ಅವರು ಫ್ರೆಂಚ್‌ನ ಸಹ ಚಾಲಕ ಗೇಬ್ರಿಯಲ್ ಮೊರೇಲ್ಸ್ ಅವರೊಂದಿಗೆ ಸ್ಪರ್ಧೆಗೆ ಇಳಿದಿದ್ದರು. ತಮ್ಮ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದಿದ್ದು ಮಾತ್ರವಲ್ಲದೆ, ಒಟ್ಟಾರೆಯಾಗಿ 37ನೇ ಸ್ಥಾನ ಪಡೆದು ಗಮನ ಸೆಳೆದರು.
‘ಫ್ರಾನ್ಸ್‌ನಲ್ಲಿ ನನ್ನ ಮೊದಲ ಅಂತರರಾಷ್ಟ್ರೀಯ ರ‍್ಯಾಲಿಯು ನಂಬಲಾಗದ ಅನುಭವ ನೀಡಿದೆ. ಈ ರ‍್ಯಾಲಿ ತುಂಬಾ ಸವಾಲಿನಿಂದ ಕೂಡಿತ್ತು. ಆದರೆ, ಸಹ ಚಾಲಕ ನನ್ನಲ್ಲಿ ಧೈರ್ಯ ತುಂಬಿದರು. ಹೀಗಾಗಿ, ಕೆಲವು ಸ್ಥಳಗಳಲ್ಲಿ ಗಂಟೆಗೆ ಸುಮಾರು 165 ಕಿಲೋ ಮೀಟರ್ ವೇಗದಲ್ಲಿ ಸಾಗಿದೆ. ಕಿರಿದಾದ ರಸ್ತೆಗಳಲ್ಲೂ ಸವಾಲಿನ ವೇಗವನ್ನು ಕಾಪಾಡಿಕೊಂಡೆ’ ಎಂದು ಪ್ರಗತಿ ಗೌಡ ಅವರು ಪ್ಯಾರಿಸ್‌ನಿಂದ ಪ್ರತಿಕ್ರಿಯಿಸಿದ್ದಾರೆ.
‘ಮುಂಬರುವ ರ‍್ಯಾಲಿಗಳಲ್ಲಿ ಕಾರ್ಯಕ್ಷಮತೆಯನ್ನು ಇನ್ನಷ್ಟು ಸುಧಾರಿಸುವತ್ತ ಗಮನ ಹರಿಸುತ್ತೇನೆ. ಪ್ರೋತ್ಸಾಹ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಈ ವಾರಾಂತ್ಯದಲ್ಲಿ ನಡೆಯುವ ರೇಸ್‌ನಲ್ಲಿ (ರ‍್ಯಾಲಿ ಟೆರ್ರೆ ಡಿ ಲೊಜೆರ್) ಉತ್ತಮ ಪ್ರದರ್ಶನ ನೀಡುವ ಗುರಿ ಹೊಂದಿದ್ದೇನೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.