ADVERTISEMENT

ಇಂಡೊನೇಷ್ಯಾ ಮಾಸ್ಟರ್ಸ್ | ಸಿಂಧು–ಸೈನಾ ಹಣಾಹಣಿ ನಿರೀಕ್ಷೆ

ನಾಳೆಯಿಂದ ಬ್ಯಾಡ್ಮಿಂಟನ್‌ ಟೂರ್ನಿ

ಪಿಟಿಐ
Published 13 ಜನವರಿ 2020, 11:42 IST
Last Updated 13 ಜನವರಿ 2020, 11:42 IST
ಸೈನಾ ನೆಹ್ವಾಲ್‌ – ಪಿವಿ ಸಿಂಧು
ಸೈನಾ ನೆಹ್ವಾಲ್‌ – ಪಿವಿ ಸಿಂಧು   

ಜಕಾರ್ತ: ಒಲಿಂಪಿಕ್‌ ಪದಕ ವಿಜೇತರಾದ ಭಾರತದ ಪಿ.ವಿ.ಸಿಂಧು ಹಾಗೂ ಸೈನಾ ನೆಹ್ವಾಲ್‌ ಅವರು ಪರಸ್ಪರ ಎದುರಾಗುವ ನಿರೀಕ್ಷೆಯಿದೆ. ಮಂಗಳವಾರ ಇಲ್ಲಿ ಆರಂಭವಾಗುವ ಇಂಡೊನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಅವರು ಕಣಕ್ಕಿಳಿಯುತ್ತಿದ್ದಾರೆ.

ವಿಶ್ವ ಚಾಂಪಿಯನ್‌ ಸಿಂಧು ಹಾಗೂ ಇಂಡೊನೇಷ್ಯಾ ಮಾಸ್ಟರ್ಸ್ ಹಾಲಿ ಚಾಂಪಿಯನ್‌ಸೈನಾ ಅವರು ಹೋದ ವಾರ ಮಲೇಷ್ಯಾ ಮಾಸ್ಟರ್ಸ್ ಟೂರ್ನಿಯ ಕ್ವಾರ್ಟರ್‌ಫೈನಲ್‌ ಹಂತದಲ್ಲಿಯೇ ಮುಗ್ಗರಿಸಿದ್ದರು. ಸಿಂಧು ಅವರು ಚೀನಾ ತೈಪೆಯ ತೈ ಜು ಯಿಂಗ್‌ ಎದುರು 16–21, 16–21ರಿಂದ ಸೋತರೆ, ಸೈನಾ ಅವರಿಗೆ ಮೂರು ಬಾರಿಯ ವಿಶ್ವ ಚಾಂಪಿಯನ್‌ ಸ್ಪೇನ್‌ನ ಕ್ಯಾರೊಲಿನಾ ಮರಿನ್‌ ಎದುರು 8–21, 7–21ರಿಂದ ಸೋಲು ಎದುರಾಗಿತ್ತು. ಇಂಡೊನೇಷ್ಯಾ ಮಾಸ್ಟರ್ಸ್ ಟೂರ್ನಿಯಲ್ಲಿ ಲಯ ಕಂಡುಕೊಳ್ಳುವ ವಿಶ್ವಾಸದಲ್ಲಿ ಭಾರತದ ಆಟಗಾರ್ತಿಯರು ಇದ್ದಾರೆ.

ಐದನೇ ಶ್ರೇಯಾಂಕದ ಸಿಂಧು, ಮೊದಲ ಪಂದ್ಯದಲ್ಲಿ ಜಪಾನ್‌ನ ಅಯಾ ಒಹೊರಿ ಎದುರು ಆಡಲಿದ್ದಾರೆ. ಮತ್ತೊಂದು ಪಂದ್ಯದಲ್ಲಿ ಸೈನಾ ಜಪಾನ್‌ನವರೇ ಆದ ಸಯಕಾ ತಕಹಶಿ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಇವೆರಡೂ ತಡೆಗಳನ್ನು ದಾಟಿದರೆಎರಡನೇ ಸುತ್ತುಗಳಲ್ಲಿ ಸೈನಾ ಹಾಗೂ ಸಿಂಧು ಪರಸ್ಪರ ಎದುರಾಗುವ ನಿರೀಕ್ಷೆಯಿದೆ. ಹಾಗಾದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರಿಬ್ಬರ ನಡುವೆ ನಡೆಯುವ ಐದನೇ ಹಣಾಹಣಿಯಾಗಲಿದೆ. ಹೋದ ನಾಲ್ಕು ಪಂದ್ಯಗಳಲ್ಲಿ ಸೈನಾ ಮೂರರಲ್ಲಿ ಗೆದ್ದಿದ್ದರೆ, ಸಿಂಧು ಅವರಿಗೆ ಒಲಿದಿದ್ದು ಕೇವಲ ಒಂದು ಜಯ.

ADVERTISEMENT

ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತುಗಳಲ್ಲಿ ಭಾರತದ ಕಿದಂಬಿ ಶ್ರೀಕಾಂತ್‌ ಅವರು ಇಂಡೊನೇಷ್ಯಾದ ಶೇಸರ್‌ ಹಿರೇನ್‌ ರುಸ್ತಾವಿಟೊ ಎದುರು, ಬಿ.ಸಾಯಿ ಪ್ರಣೀತ್‌ ಅವರು ಚೀನಾದ ಸಿ ಯು ಕಿ ವಿರುದ್ಧ, ಪರುಪಳ್ಳಿ ಕಶ್ಯಪ್‌ ಹಾಗೂ ಎಚ್‌.ಎಸ್‌.ಪ್ರಣಯ್‌ ಅವರು ಕ್ರಮವಾಗಿ ಸ್ಥಳೀಯ ಆಟಗಾರರಾದ ಅಂಥೋನಿ ಸಿನಿಸುಕ ಗಿಂಟಿಂಗ್‌ ಹಾಗೂ ಜೋನಾಥನ್‌ ಕ್ರಿಸ್ಟಿ ಎದುರು ಅದೃಷ್ಟ ಪರೀಕ್ಷಿಸಲಿದ್ದಾರೆ. ಸಮೀರ್‌ ವರ್ಮಾ ಅವರು ಟಾಮಿ ಸುಗಿಯಾರ್ಟೊ ವಿರುದ್ಧ ಕಣಕ್ಕಿಳಿಯಲಿದ್ದಾರೆ.

ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ–ಚಿರಾಗ್‌ಶೆಟ್ಟಿ, ಮಹಿಳಾ ಡಬಲ್ಸ್‌ನಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ–ಎನ್‌.ಸಿಕ್ಕಿ ರೆಡ್ಡಿ, ಮಿಶ್ರ ಡಬಲ್ಸ್‌ನಲ್ಲಿ ಸಾತ್ವಿಕ್‌–ಅಶ್ವಿನಿ, ಪ್ರಣವ್‌ ಜೆರ್ರಿ ಚೋಪ್ರಾ–ಸಿಕ್ಕಿ ಜೋಡಿಗಳು ಭಾರತವನ್ನು ಪ್ರತಿನಿಧಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.