ADVERTISEMENT

ಐಒಎ ಏಕಪಕ್ಷೀಯ ನಿರ್ಧಾರ ಕೈಗೊಳ್ಳುವಂತಿಲ್ಲ: ರಿಜಿಜು

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 20:15 IST
Last Updated 25 ಜೂನ್ 2019, 20:15 IST
ಕಿರಣ್‌ ರಿಜಿಜು
ಕಿರಣ್‌ ರಿಜಿಜು   

ನವದೆಹಲಿ (ಪಿಟಿಐ): ಬರ್ಮಿಂಗಂನಲ್ಲಿ ನಡೆಯಲಿರುವ 2022ರ ಕಾಮನ್‌ವೆಲ್ತ್‌ ಕ್ರೀಡೆಗಳಿಂದ ಹಿಂದೆಸರಿಯುವುದಕ್ಕೆ ಸಂಬಂಧಿಸಿ ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಏಕಪಕ್ಷೀಯ ತೀರ್ಮಾನ ಕೈಗೊಳ್ಳುವಂತಿಲ್ಲ ಎಂದು ಕ್ರೀಡಾಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ.

ಕ್ರೀಡೆಗಳಿಂದ ಶೂಟಿಂಗ್‌ ಕೈಬಿಟ್ಟಿರುವುದನ್ನು ಖಂಡಿಸಿ ಕ್ರೀಡೆಗಳನ್ನು ಬಹಿಷ್ಕರಿಸುವುದಾಗಿ ಐಒಎ ಬೆದರಿಕೆ ಹಾಕಿತ್ತು.

ಕಳೆದ ವಾರ ಕಾಮನ್‌ವೆಲ್ತ್‌ ಕ್ರೀಡಾ ಫೆಡರೇಷನ್‌ ತನ್ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ಬರ್ಮಿಂಗಂ ಕ್ರೀಡೆಗಳ ಪಟ್ಟಿಯಿಂದ ಶೂಟಿಂಗ್‌ ಸ್ಪರ್ಧೆಯನ್ನು ಕೈಬಿಡುವುದಾಗಿ ಮತ್ತು ಮೂರು ಹೊಸ ಸ್ಪರ್ಧೆಗಳ ಸೇರ್ಪಡೆಗೆ ಶಿಫಾರಸು ಮಾಡಿತ್ತು.

ADVERTISEMENT

ಈ ನಿರ್ಧಾರ ಭಾರತಕ್ಕೆ ಹಿನ್ನಡೆಯಾಗಿತ್ತು. ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಕ್ರೀಡೆಗಳ ಶೂಟಿಂಗ್‌ನಲ್ಲಿ ಭಾರತ, ಒಟ್ಟು 66 ಪದಕಗಳ ಪೈಕಿ 16 ಗೆದ್ದುಕೊಂಡಿತ್ತು. ಈ ಹಿನ್ನೆಲೆಯಲ್ಲಿ 2022ರ ಕ್ರೀಡೆಗಳಿಂದ ಹಿಂದೆಸರಿಯುವ ಯೋಚನೆ ಮಾಡುವುದಾಗಿ ಐಒಎ ಹೇಳಿತ್ತು.

‘ಈ ವಿಷಯದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಮೊದಲು ಕ್ರೀಡಾ ಸಚಿವಾಲಯವು, ಈ ವಿಷಯದಲ್ಲಿ ಭಾರತ ರಾಷ್ಟ್ರೀಯ ರೈಫಲ್‌ ಅಸೋಸಿಯಷನ್‌ (ಎನ್‌ಆರ್‌ಎಐ) ಮತ್ತು ಐಒಎ ಜೊತೆ ಮಾತುಕತೆ ನಡೆಸಲಿದೆ’ ಎಂದು ರಿಜಿಜು ಹೇಳಿದ್ದಾರೆ.

‘ಈ ವಿಷಯವಾಗಿ ನಾನಿನ್ನೂ ಶೂಟಿಂಗ್‌ ಫೆಡರೇಷನ್‌ ಜೊತೆ ಚರ್ಚಿಸಿಲ್ಲ. ಅವರ ನಿಲುವು ಏನೆಂಬುದು ನನಗೆ ಅಧಿಕೃತವಾಗಿ ಗೊತ್ತಿಲ್ಲ. ಬಹಿಷ್ಕಾರ ಹಾಕುವುದಾದರೆ ಸರ್ಕಾರವನ್ನು ಕೇಳಬೇಕು. ಈ ವಿಷಯದಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳುವಂತಿಲ್ಲ’ ಎಂದು ರಿಜಿಜು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.