
ಕೈರೊ: ಭಾರತದ ಯುವ ಶೂಟರ್ ಸಾಮ್ರಾಟ್ ರಾಣಾ ಅವರು ಸೋಮವಾರ ಐಎಸ್‌ಎಸ್‌ಎಫ್ ವಿಶ್ವ ಚಾಂಪಿಯನ್‌ಷಿಪ್‌ನ ಪುರುಷರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನಕ್ಕೆ ಗುರಿಯಿಟ್ಟರು.
ಕರ್ನಲ್ ಮೂಲದ ಸಾಮ್ರಾಟ್ ಫೈನಲ್‌ನಲ್ಲಿ 243.7 ಅಂಕಗಳನ್ನು ಗಳಿಸಿ ಚೀನಾದ ಹು ಕೈ ಅವರನ್ನು ಸೋಲಿಸಿದರು. 243.3 ಅಂಕಗಳೊಂದಿಗೆ ಹು ಕೈ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಉತ್ತರ ಪ್ರದೇಶದ ಬಾಗ್‌ಪತ್‌ನ ವರುಣ್ ತೋಮರ್ ಅವರು 221.7 ಅಂಕಗಳೊಂದಿಗೆ ಕಂಚಿನ ಪದಕ ಗೆದ್ದರು.
ಮನು, ಇಶಾಗೆ ತಪ್ಪಿದ ಪದಕ: ಒಲಿಂಪಿಕ್ ಅವಳಿ ಪದಕ ವಿಜೇತ ಶೂಟರ್ ಮನು ಭಾಕರ್ ಮತ್ತು ಏಷ್ಯನ್ ಕ್ರೀಡಾಕೂಟದ ಪದಕ ವಿಜೇತೆ ಇಶಾ ಸಿಂಗ್ ಅವರು ಮಹಿಳೆಯರ ವೈಯಕ್ತಿಕ 10 ಮೀಟರ್ ಏರ್ ಪಿಸ್ತೂಲ್ ಫೈನಲ್ ಪದಕ ಗೆಲ್ಲಲು ವಿಫಲರಾದರು. ಆದರೆ, ತಂಡ ವಿಭಾಗದಲ್ಲಿ ಸುರುಚಿ ಸಿಂಗ್ ಅವರೊಂದಿಗೆ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
ಇಶಾ (583), ಮನು (580) ಮತ್ತು ಸುರುಚಿ (577) ಹೀಗೆ ಒಟ್ಟು 1740 ಅಂಕಗಳೊಂದಿಗೆ ತಂಡ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದರು. ವೈಯಕ್ತಿಕ ಸ್ಪರ್ಧೆಯಲ್ಲಿ ಇಶಾ ಆರನೇ ಸ್ಥಾನ ಮತ್ತು ಮನು ಏಳನೇ ಸ್ಥಾನಗಳೊಂದಿಗೆ ಅಭಿಯಾನ ಮುಗಿಸಿದರು.
ಮೂರು ಚಿನ್ನ, ಮೂರು ಬೆಳ್ಳಿ ಮತ್ತು ಮೂರು ಕಂಚಿನೊಂದಿಗೆ ಭಾರತ ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆರು ಚಿನ್ನ, ನಾಲ್ಕು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳೊಂದಿಗೆ ಚೀನಾ ಅಗ್ರಸ್ಥಾನದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.