ADVERTISEMENT

ಐಎಸ್‌ಎಸ್‌ಎಫ್ ಶೂಟಿಂಗ್‌ ವಿಶ್ವಕಪ್‌: ಭಾರತ ಮಹಿಳೆಯರ ‘ಚಿನ್ನದ ಗುರಿ’

ಇಳವೆನ್ನಿಲಾ, ರಮಿತಾ, ಶ್ರೇಯಾ ಸಾಧನೆ

ಪಿಟಿಐ
Published 31 ಮೇ 2022, 12:28 IST
Last Updated 31 ಮೇ 2022, 12:28 IST
ಚಿನ್ನ ಜಯಿಸಿದ ಭಾರತದ (ಎಡದಿಂದ) ರಮಿತಾ, ಶ್ರೇಯಾ ಅಗರವಾಲ್ ಮತ್ತು ಇಳವೆನ್ನಿಲಾ ವಾಳರಿವನ್ ಸಂಭ್ರಮ– ಪಿಟಿಐ ಚಿತ್ರ
ಚಿನ್ನ ಜಯಿಸಿದ ಭಾರತದ (ಎಡದಿಂದ) ರಮಿತಾ, ಶ್ರೇಯಾ ಅಗರವಾಲ್ ಮತ್ತು ಇಳವೆನ್ನಿಲಾ ವಾಳರಿವನ್ ಸಂಭ್ರಮ– ಪಿಟಿಐ ಚಿತ್ರ   

ನವದೆಹಲಿ: ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತ ಪದಕದ ಖಾತೆ ತೆರೆದಿದೆ. ಇಳವೆನ್ನಿಲಾ ವಾಳರಿವನ್‌, ರಮಿತಾ ಮತ್ತು ಶ್ರೇಯಾ ಅಗರವಾಲ್ ಅವರಿದ್ದ ಮಹಿಳಾ ತಂಡವು 10 ಮೀಟರ್ಸ್‌ ಏರ್ ರೈಫಲ್‌ ವಿಭಾಗದಲ್ಲಿ ಮಂಗಳವಾರ ಚಿನ್ನದ ಪದಕಕ್ಕೆ ಮುತ್ತಿಟ್ಟಿದೆ.

ಅಜರ್‌ಬೈಜಾನ್‌ನ ಬಾಕುವಿನಲ್ಲಿ ನಡೆಯುತ್ತಿರುವ ಟೂರ್ನಿಯಫೈನಲ್‌ ಹಣಾಹಣಿಯಲ್ಲಿ ಭಾರತದ ಶೂಟರ್‌ಗಳು 17–5ರಿಂದ ಡೆನ್ಮಾರ್ಕ್‌ನ ಅನ್ನಾ ನೆಲ್ಸನ್‌, ಎಮ್ಮಾ ಕೋಚ್‌ ಮತ್ತು ರಿಕ್ಕೆ ಮಾಂಗ್ ಇಬ್ಸೆನ್ ಅವರನ್ನು ಪರಾಭವಗೊಳಿಸಿದರು. ಪೋಲೆಂಡ್‌ ತಂಡವು ಕಂಚಿನ ಪದಕ ಗಳಿಸಿತು.

ಈ ಹಿಂದೆ ವಿಶ್ವ ಕ್ರಮಾಂಕದದಲ್ಲಿ ಅಗ್ರಸ್ಥಾನದಲ್ಲಿದ್ದ ಇಳವೆನ್ನಿಲಾ, ರಮಿತಾ ಮತ್ತು ಶ್ರೇಯಾ ಸೋಮವಾರ ಎರಡು ಸುತ್ತುಗಳ ಅರ್ಹತಾ ಪಂದ್ಯಗಳ ಮೂಲಕ ಫೈನಲ್‌ಗೆ ಪ್ರವೇಶಿಸಿದ್ದರು. ಮೊದಲ ಸುತ್ತಿನಲ್ಲಿ 944.4 ಪಾಯಿಂಟ್ಸ್ ಗಳಿಸಿ ಮೊದಲ ಸ್ಥಾನ ಪ‍ಡೆದಿದ್ದ ತಂಡವು, ಎರಡನೇ ಸುತ್ತಿನಲ್ಲಿ ಡೆನ್ಮಾರ್ಕ್ ಎದುರು ಹಿನ್ನಡೆ ಅನುಭವಿಸಿ ಎರಡನೇ ಸ್ಥಾನ ಗಳಿಸಿತ್ತು.

ADVERTISEMENT

ಕಂಚಿನ ಪದಕದ ಸುತ್ತಿಗೆ ಪ್ರವೇಶಿಸಿದ್ದ ಭಾರತ ಪುರುಷರ ತಂಡವು ಕ್ರೊವೇಷ್ಯಾ ಎದುರು ನಿರಾಸೆ ಅನುಭವಿಸಿತು. ರುದ್ರಾಂಕ್ಷ್ ಪಾಟೀಲ್, ಪಾರ್ಥ್ ಮಖೀಜಾ ಮತ್ತು ಧನುಷ್ ಶ್ರೀಕಾಂತ್ ಅವರನ್ನೊಳಗೊಂಡ ತಂಡವು 10–16ರಿಂದ ಕ್ರೊವೇಷ್ಯಾ ಎದುರು ಸೋಲು ಕಂಡಿತು.

12 ಶೂಟರ್‌ಗಳನ್ನು ಒಳಗೊಂಡ ಭಾರತ ರೈಫಲ್ ತಂಡವು ಸದ್ಯ ಟೂರ್ನಿಯ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಎರಡು ಚಿನ್ನ ಸೇರಿದಂತೆ ಒಟ್ಟು ನಾಲ್ಕು ಪದಕಗಳನ್ನು ತನ್ನದಾಗಿಸಿಕೊಂಡಿರುವ ಸರ್ಬಿಯಾ ಅಗ್ರಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.