ADVERTISEMENT

ಒಲಿಂಪಿಕ್ಸ್: ಲಸಿಕೆ ಹಂಚಿಕೆಗೆ ವೇಗ ನೀಡಿದ ಜಪಾನ್‌

ಟೋಕಿಯೊ ಕೂಟಕ್ಕೆ ಎರಡು ತಿಂಗಳು ಬಾಕಿ: ಸಾಮೂಹಿಕ ಲಸಿಕಾ ಕೇಂದ್ರ ಆರಂಭ

ಪಿಟಿಐ
Published 24 ಮೇ 2021, 16:27 IST
Last Updated 24 ಮೇ 2021, 16:27 IST

ಟೋಕಿಯೊ: ಒಲಿಂಪಿಕ್ಸ್‌ ಆರಂಭಕ್ಕೆ ಎರಡು ತಿಂಗಳು ಬಾಕಿ ಇರುವಂತೆಯೇ ಜಪಾನ್ ಸರ್ಕಾರ ಲಸಿಕೆ ಹಂಚಿಕೆಯನ್ನು ತ್ವರಿತಗೊಳಿಸುವ ಮೂಲಕ ಕೋವಿಡ್‌ ಸೋಂಕು ನಿಯಂತ್ರಣಕ್ಕೆ ಮುಂದಾಗಿದೆ. ಅದಕ್ಕಾಗಿ ಟೋಕಿಯೊ ಮತ್ತು ಒಸಾಕಾದಲ್ಲಿನ ಹಿರಿಯರಿಗೆ ಲಸಿಕೆ ನೀಡಲು ಸೋಮವಾರ ಸೇನಾ ವೈದ್ಯರು ಮತ್ತು ದಾದಿಯರನ್ನು ನಿಯೋಜಿಸಿದೆ.

ಒಂದು ವರ್ಷದ ವಿಳಂಬದ ನಂತರ ಪ್ರಧಾನಿ ಯೋಶಿಹಿದೆ ಸುಗಾ ಅವರು ಟೋಕಿಯೊದಲ್ಲಿ ಒಲಿಂಪಿಕ್ಸ್‌ ಆಯೋಜಿಸಲು ನಿರ್ಧರಿಸಿದ್ದಾರೆ. ಹೀಗಾಗಿ, ಜುಲೈ ಹೊತ್ತಿಗೆ ರಾಷ್ಟ್ರದ 3.6 ಕೋಟಿ ಹಿರಿಯರಿಗೆ ಲಸಿಕೆ ನೀಡುವ ಮಹತ್ವಾಕಾಂಕ್ಷಿ ಕಾರ್ಯಕ್ಕೆ (ಅಸಂಭವ ಎನಿಸಿದರೂ) ಮುಂದಾಗಿದ್ದಾರೆ.

ಇನ್ನೂ ಬಹಳಷ್ಟು ಜನರಿಗೆ ಲಸಿಕೆ ಪೂರೈಕೆಯಾಗಿಲ್ಲದ ಕಾರಣ ಮತ್ತು ಸುರಕ್ಷತೆಯ ಬಗೆಗಿನ ಆತಂಕವು ಜನರ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದು, ಜುಲೈ 23ರಿಂದ ಆರಂಭವಾಗಲಿರುವ ಕ್ರೀಡಾಕೂಟವನ್ನು ರದ್ದುಗೊಳಿಸುವಂತೆ ಆಗ್ರಹಿಸುತ್ತಿದ್ದಾರೆ.

ADVERTISEMENT

ಸುಗಾ ಸರ್ಕಾರ ಕಳೆದ ಏಪ್ರಿಲ್‌ನಿಂದ ಕೋವಿಡ್‌ ನಿಯಂತ್ರಣಕ್ಕೆ ತುರ್ತು ಪರಿಸ್ಥಿತಿ ಹೇರಿ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಟೋಕಿಯೊ ಸೇರಿದಂತೆ ಜಪಾನ್‌ನ ಶೇ 40ರಷ್ಟು ಜನಸಂಖ್ಯೆ ಇರುವ ಒಂಬತ್ತು ನಗರಗಳಲ್ಲಿ ತುರ್ತುಪರಿಸ್ಥಿತಿ ಮುಂದುವರಿದಿದೆ. ಆದರೆ, ಈಗಲೂ ಕೋವಿಡ್‌ ಪ್ರಕರಣಗಳು ಹೆಚ್ಚಾಗಿವೆ. ಸೋಂಕು ನಿಯಂತ್ರಣಕ್ಕೆ ಲಸಿಕೆಯೊಂದೇ ಪರಿಹಾರವಾಗಿದೆ ಎಂದು ಸುಗಾ ತಿಳಿಸಿದ್ದಾರೆ.

ಟೋಕಿಯೊ ಕೇಂದ್ರಕ್ಕೆ ಭೇಟಿ ನೀಡಿದ್ದ ಸುಗಾ, ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಮುಂದಿನ ಮೂರು ತಿಂಗಳಲ್ಲಿ ಟೋಕಿಯೊದಲ್ಲಿ ಪ್ರತಿದಿನ 10 ಸಾವಿರ ಮಂದಿ ಮತ್ತು ಒಸಾಕಾದಲ್ಲಿ ಪ್ರತಿದಿನ 5 ಸಾವಿರ ಮಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.

‘ಇದೊಂದು ಅಭೂತಪೂರ್ವ ಸವಾಲು. ಈ ಕಾರ್ಯಕ್ರಮ ಜಾರಿಗೊಳಿಸಲು ಸಾಧ್ಯವಾಗುವ ಎಲ್ಲವನ್ನೂ ನಾವು ಮಾಡುತ್ತೇವೆ. ಲಸಿಕೆ ಪಡೆದುಕೊಂಡು ಜನ ಸಹಜ ಜೀವನಕ್ಕೆ ಮರಳಬೇಕು‘ ಎಂದು ಸುಗಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.