ADVERTISEMENT

ತರಬೇತಿ ಪಡೆಯದೆ ಜಾವಲಿನ್ ಎಸೆತದಲ್ಲಿ ಅಪ್ರತಿಮ ಸಾಧನೆಗೈದ ಯುವಕ

ಶಿಕ್ಷಕರ ಮಾರ್ಗದರ್ಶನವೇ ಎಲ್ಲ

ಪರಮೇಶ್ವರ ಎಸ್.ಜಿ.
Published 9 ಜುಲೈ 2019, 19:30 IST
Last Updated 9 ಜುಲೈ 2019, 19:30 IST
ಪ್ರಮಾಣಪತ್ರ, ಪದಕಗಳೊಂದಿಗೆ ಸಿದ್ದಪ್ಪ ಅಟಪಳಕರ, ಶಿಕ್ಷಕ ಮಾರುತಿ ಜಾಧವ ಅವರೊಂದಿಗೆ
ಪ್ರಮಾಣಪತ್ರ, ಪದಕಗಳೊಂದಿಗೆ ಸಿದ್ದಪ್ಪ ಅಟಪಳಕರ, ಶಿಕ್ಷಕ ಮಾರುತಿ ಜಾಧವ ಅವರೊಂದಿಗೆ   

ತಿಕೋಟಾ: ಯಾವುದೇ ವಿಶೇಷ ತರಬೇತಿಯನ್ನು ಪಡೆಯದೆಯೇ, ದೈಹಿಕ ಶಿಕ್ಷಣ ಶಿಕ್ಷಕರ ಮಾರ್ಗದರ್ಶನದಲ್ಲಿ ಜಾವಲಿನ್ ಎಸೆತದಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ವಿದ್ಯಾರ್ಥಿಯೊಬ್ಬ ಅಪ್ರತಿಮ ಸಾಧನೆ ಮಾಡಿದ್ದಾನೆ.

ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಸಿದ್ದಪ್ಪ ಅಟಪಳಕರ ಈ ಸಾಧನೆ ಮಾಡಿದವ. ಚಿಕ್ಕಂದಿನಿಂದಲೂ ಆಟದಲ್ಲಿ ಆಸಕ್ತಿ ಹೊಂದಿದ್ದ ಈತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಂತದ ಎಲ್ಲ ಆಟಗಳಲ್ಲಿ ಭಾಗವಹಿಸುತ್ತಿದ್ದ.

2010-11ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಪ್ರೌಢಶಾಲಾ ವಿಭಾಗದ ಜಾವಲಿನ್ ಎಸೆತದಲ್ಲಿ ತಾಲ್ಲೂಕು ಮಟ್ಟದಲ್ಲಿ ಪ್ರಥಮ, ಜಿಲ್ಲಾ ಮಟ್ಟದಲ್ಲಿ ಪ್ರಥಮ, 2011-12ರಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಅಡಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ, ನಂತರ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ದ್ವೀತಿಯ ಸ್ಥಾನ ಪಡೆದುಕೊಂಡಿದ್ದಾನೆ.

ADVERTISEMENT

2012-13ರಲ್ಲಿ ಕರ್ನಾಟಕ ರಾಜ್ಯದ ಪರವಾಗಿ ಉತ್ತರ ಪ್ರದೇಶದ ಇಟಾವಾಹದಲ್ಲಿ ನಡೆದ 58 ನ್ಯಾಷನಲ್ ಸ್ಕೂಲ್ ಗೇಮ್ಸ್‌ ಅಥ್ಲೆಟಿಕ್‌ ಸ್ಪರ್ಧೆಯಲ್ಲಿ ಭಾಗವಹಿಸಿದ ಕೀರ್ತಿ ಈತನದ್ದು.

ಇಷ್ಟೆ ಅಲ್ಲದೇ, 2011ರಲ್ಲಿ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಜ್ಯೂನಿಯರ್ ಅಥ್ಲೆಟಿಕ್ ಚಾಂಪಿಯನಶಿಪ್‌ನ ಜಾವಲಿನ್‌ ಎಸೆತದಲ್ಲಿ ಪ್ರಥಮ ಸ್ಥಾನ, ವಿಜಯಪುರದ ನೆಹರೂ ಯುವ ಕೇಂದ್ರ ನಡೆಸಿದ ಸ್ಪರ್ಧೆಯಲ್ಲೂ ಪ್ರಥಮ ಸ್ಥಾನ ಗಳಿಸಿದ್ದಾನೆ.

2014-15ರಲ್ಲಿ ಬೆಳಗಾವಿಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಡೆಸಿದ ದಸರಾ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು, ಮೈಸೂರಿನಲ್ಲಿ ನಡೆದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾನೆ.

ಜಾವಲಿನ್ ಎಸೆತ ಅಷ್ಟೆ ಅಲ್ಲದೇ 2010-11 ರಲ್ಲಿ ತಾಲ್ಲೂಕು ಮಟ್ಟದ ಟ್ರಿಪಲ್‌ ಜಂಪ್‌ನಲ್ಲಿ ಪ್ರಥಮ, ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ.

ಸಿದ್ದಪ್ಪ 4ನೇ ತರಗತಿಯಲ್ಲಿ ಇದ್ದಾಗ ತಂದೆಯನ್ನು ಕಳೆದುಕೊಂಡ. ತಾಯಿಯ ಆಶ್ರಯದಲ್ಲಿ ಬೆಳೆದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕಳ್ಳಕವಟಗಿಯಲ್ಲಿ ಪೂರೈಸಿದ. ವಿಜಯಪುರದ ವಿ.ಬಿ.ದರಬಾರ ಕಾಲೇಜಿನಲ್ಲಿ ಪಿಯು ಓದಿ, ಇದೀಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

‘2016ರಲ್ಲಿ ಕ್ರೀಡಾ ಅಭ್ಯಾಸ ಮಾಡುತ್ತಿದ್ದಾಗ ಕೈಮೂಳೆ ಮುರಿಯಿತು. ಇದು ಒಂದೆಡೆಯಾದರೆ, ಇನ್ನೊಂದೆಡೆ ಆರ್ಥಿಕ ತೊಂದರೆ ಎದುರಾಯಿತು. ಹೀಗಾಗಿ ಯಾವ ಸ್ಪರ್ಧೆಗಳಲ್ಲೂ ಪಾಲ್ಗೊಳ್ಳಲಿಲ್ಲ. ಮುಂಬರುವ ದಿನಗಳಲ್ಲಿ ಮತ್ತೆ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುತ್ತೇನೆ’ ಎಂದು ಸಿದ್ದಪ್ಪ ಹೇಳಿದರು.

‘ಯಾವುದೇ ವಿಶೇಷ ತರಬೇತಿ ಪಡೆಯದೇ ತನ್ನ ಸ್ವ ಸಾಮರ್ಥದ ಮೂಲಕ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ, ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾನೆ. ಇದು ಹೆಮ್ಮೆಯ ಸಂಗತಿ’ ಎಂದು ತಿಕೋಟಾ ತಾಲ್ಲೂಕು ಕಳ್ಳಕವಟಗಿ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮಾರುತಿ ಜಾಧವ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.