ADVERTISEMENT

ಸದ್ಯ ನಿರಾಳ; ಎಸೆತ ಸುಧಾರಣೆಯತ್ತ ಚಿತ್ತ: ನೀರಜ್‌ ಚೋಪ್ರಾ

90 ಮೀ. ಗಡಿ ದಾಟಿದ ಖುಷಿಯಲ್ಲಿ ಜಾವೆಲಿನ್‌ ತಾರೆ

ಪಿಟಿಐ
Published 17 ಮೇ 2025, 15:57 IST
Last Updated 17 ಮೇ 2025, 15:57 IST
ನೀರಜ್‌ ಚೋಪ್ರಾ ಜಾವೆಲಿನ್‌ ಎಸೆತದ ಭಂಗಿ –ಪಿಟಿಐ ಚಿತ್ರ
ನೀರಜ್‌ ಚೋಪ್ರಾ ಜಾವೆಲಿನ್‌ ಎಸೆತದ ಭಂಗಿ –ಪಿಟಿಐ ಚಿತ್ರ   

ದೋಹಾ:‌ 90 ಮೀಟರ್‌ ದೂರ ಜಾವೆಲಿನ್‌ ಎಸೆಯುವ ಗುರಿಯನ್ನು ಸಾಧಿಸಿ‌ರುವ ಭಾರತದ ಜಾವೆಲಿನ್‌ ತಾರೆ ನೀರಜ್‌ ಚೋಪ್ರಾ ಸದ್ಯ ನಿರಾಳರಾಗಿದ್ದಾರೆ. ಆದರೆ, ಮುಂದಿನ ಕೂಟಗಳಲ್ಲಿ ತನ್ನ ಎಸೆತವನ್ನು ಇನ್ನಷ್ಟು ಸುಧಾರಿಸುವತ್ತ ಚಿತ್ತ ಹರಿಸಿದ್ದಾರೆ.

ದೋಹಾದಲ್ಲಿ ಶುಕ್ರವಾರ ರಾತ್ರಿ ನಡೆದ ಡೈಮಂಡ್‌ ಲೀಗ್‌ ಕೂಟದಲ್ಲಿ ನೀರಜ್‌ ಜಾವೆಲಿನ್‌ ಅನ್ನು 90.23 ಮೀಟರ್‌ ದೂರ ಎಸೆದು, ವೈಯಕ್ತಿಕ ಶ್ರೇಷ್ಠ ಪ್ರದರ್ಶನ ಮೆರೆದರು. 89.94 ಮೀಟರ್‌ ಅವರ ಈ ಹಿಂದಿನ ಶ್ರೇಷ್ಠ ಸಾಧನೆಯಾಗಿತ್ತು. ನೀರಜ್ ಬಹಳ ಕಾಲದಿಂದ 90 ಮೀಟರ್ ದೂರ ಈಟಿ ಎಸೆಯಲು ಪ್ರಯತ್ನಿಸುತ್ತಿದ್ದರು. ಆದರೆ, ಯಶ ಕಂಡಿರಲಿಲ್ಲ. ಆದರೆ, ಸುಹೀಮ್ ಬಿನ್ ಹಮದ್ ಕ್ರೀಡಾಂಗಣದಲ್ಲಿ ಅವರ ಕನಸು ನನಸಾಗಿದೆ. 

ಈ ಸಾಧನೆಯ ಹೊರತಾಗಿಯೂ ನೀರಜ್‌ ಇಲ್ಲಿ ಎರಡನೇ ಸ್ಥಾನ ಪಡೆದರು. ಜರ್ಮನಿಯ ಜೂಲಿಯನ್ ವೆಬರ್‌ (91.06 ಮೀ) ಅಗ್ರಸ್ಥಾನಿಯಾದರು. ಗ್ರೆನೆಡಾದ ಆಂಡರ್ಸನ್ ಪೀಟರ್ಸ್ (85.64 ಮೀ.) ಮೂರನೇ ಸ್ಥಾನ ಪಡೆದರು. 

ADVERTISEMENT

‘ಕೆಲವು ವರ್ಷಗಳಿಂದ ತನ್ನನ್ನು ಕಾಡುತ್ತಿದ್ದ ತೊಡೆಸಂದಿನ ನೋವಿನಿಂದ ಮುಕ್ತವಾಗಿರುವುದರಿಂದ ಈ ಸಾಧನೆ ಸಾಧ್ಯವಾಗಿದೆ. ವರ್ಷಾಂತ್ಯದಲ್ಲಿ ನಡೆಯುವ ವಿಶ್ವ ಚಾಂಪಿಯನ್‌ಷಿಪ್‌ವರೆಗಿನ ಕೂಟಗಳಲ್ಲಿ 90 ಮೀಟರ್‌ ದೂರ ಎಸೆಯುವ ಆತ್ಮವಿಶ್ವಾಸ ಮೂಡಿದೆ’ ಎಂದು ಸ್ಪರ್ಧೆಯ ನಂತರ 27 ವರ್ಷ ವಯಸ್ಸಿನ ನೀರಜ್‌ ಪ್ರತಿಕ್ರಿಯಿಸಿದ್ದಾರೆ.

ಹಲವು ಬಾರಿಯ ಒಲಿಂಪಿಕ್ ಚಾಂಪಿಯನ್ ಯಾನ್ ಝೆಲೆಜ್ನಿ ಪ್ರಭಾವವನ್ನು ಶ್ಲಾಘಿಸಿದ ನೀರಜ್‌, ‘ನಾವು ಈ ವರ್ಷದ ಫೆಬ್ರುವರಿಯಲ್ಲಿ ಒಟ್ಟಿಗೆ ಕೆಲಸ ಪ್ರಾರಂಭಿಸಿದೆವು. ಈ ಅವಧಿಯಲ್ಲಿ ಸಾಕಷ್ಟು ಹೊಸ ವಿಚಾರಗಳನ್ನು ಅವರಿಂದ ಕಲಿತಿದ್ದೇನೆ. ಇನ್ನೂ ಕೆಲವು ಅಂಶಗಳ ಮೇಲೆ ಒಟ್ಟಾಗಿ ಕೆಲಸ ಮಾಡುತ್ತೇವೆ’ ಎಂದು ಹೇಳಿದರು.

ಜೆಕ್‌ ರಿಪಬ್ಲಿಕ್‌ನ ಝೆಲೆಜ್ನಿ ಅವರನ್ನು ನೀರಜ್‌ ತಮ್ಮ ವೈಯಕ್ತಿಕ ಕೋಚ್ ಆಗಿ ಕಳೆದ ನವೆಂಬರ್‌ನಲ್ಲಿ ನೇಮಿಸಿಕೊಂಡಿದ್ದರು. ಅತಿ ದೂರದ ಎಸೆತದ (98.48 ಮೀ) ವಿಶ್ವದಾಖಲೆಯನ್ನು ಹೊಂದಿರುವ ಝೆಲೆಜ್ನಿ ಸಾಮಾನ್ಯವಾಗಿ ಡೈಮಂಡ್ ಲೀಗ್‌ಗಳಿಗೆ ಹಾಜರಾಗುವುದಿಲ್ಲ. ಆದರೆ, ದೋಹಾದಲ್ಲಿ ಚೋಪ್ರಾ ಅವರೊಂದಿಗೆ ಕಾಣಿಸಿಕೊಂಡು, ವಿಶೇಷ ಕ್ಷಣಕ್ಕೆ ಸಾಕ್ಷಿಯಾದರು.

ಹರಿಯಾಣದ ನೀರಜ್‌ ಅವರು ಸೆಪ್ಟೆಂಬರ್ 13ರಿಂದ 21ರವರೆಗೆ ಟೋಕಿಯೊದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವ ಛಲದಲ್ಲಿದ್ದಾರೆ. 

ಪ್ರಧಾನಿ ಅಭಿನಂದನೆ: ‘ಡೈಮಂಡ್‌ ಲೀಗ್‌ ಕೂಟದಲ್ಲಿ ಜಾವೆಲಿನ್‌ ಅನ್ನು 90.23 ಮೀಟರ್‌ ದೂರ ಎಸೆದು, ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿರುವ ನೀರಜ್ ಚೋಪ್ರಾ ಅವರಿಗೆ ಅಭಿನಂದನೆಗಳು. ಇದು ಅವರ ನಿರಂತರ ಸಮರ್ಪಣೆ, ಶಿಸ್ತು ಮತ್ತು ಉತ್ಸಾಹದ ಫಲಿತಾಂಶವಾಗಿದೆ. ಅವರ ಸಾಧನೆಗೆ ದೇಶ ಹೆಮ್ಮೆಪಡುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

90 ಮೀಟರ್‌ ಗಡಿ ದಾಟಿದ ಸಂಭ್ರಮದಲ್ಲಿ ನೀರಜ್‌ ಚೋಪ್ರಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.