
ನವದೆಹಲಿ: ದೋಹಾದಲ್ಲಿ ಡಿಸೆಂಬರ್ 25 ರಿಂದ 30ರವರೆಗೆ ನಡೆಯಲಿರುವ ವಿಶ್ವ ರ್‍ಯಾಪಿಡ್ ಮತ್ತು ಬ್ಲಿಟ್ಝ್ ಚಾಂಪಿಯನ್‌ಷಿಪ್‌ನಲ್ಲಿ ಉಡುಪು ಸಂಹಿತೆಯನ್ನು ಸಡಿಲಿಸಿರುವುದಾಗಿ ಅಂತರರಾಷ್ಟ್ರೀಯ ಚೆಸ್ ಫೆಡರೇಷನ್ (ಫಿಡೆ) ಪ್ರಕಟಿಸಿದೆ.
2024ರಲ್ಲಿ ಇದೇ ಚಾಂಪಿಯನ್‌ಷಿಪ್ ವೇಳೆ ನೀಲಿ ಜೀನ್ಸ್ ಧರಿಸಿ ಆಟವಾಡಲು ಬಂದಿದ್ದಕ್ಕೆ ಮಾಜಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಚೀಫ್ ಆರ್ಬಿಟರ್ (ಮುಖ್ಯ ತೀರ್ಪುಗಾರ) ಅವರು ಹೊರಕಳಿಸಿದ್ದರು. ಪ್ಯಾಂಟ್ ಬದಲಿಸಿಕೊಂಡು ಬರಲು ನೀಡಿದ ಅವಕಾಶ ಒಪ್ಪದ ಕಾರ್ಲ್‌ಸನ್ ಟೂರ್ನಿ ಬಹಿಷ್ಕರಿಸಿದ್ದರು. ಇದು ಚರ್ಚೆಗೊಳಗಾಗಿ ಈ ಪ್ರಕರಣ ‘ಜೀನ್ಸ್ ಗೇಟ್’ ಎಂಬ ಹೆಸರು ಪಡೆಯಿತು.
ಕಡುಬಣ್ಣದ ಪ್ಯಾಂಟ್‌ಗಳನ್ನು ಧರಿಸಲು, ನೀಲಿ, ಕಪ್ಪು, ಬೂದು ಬಣ್ಣದ ಜೀನ್ಸ್ ಪ್ಯಾಂಟ್, ಟೀ ಶರ್ಟ್ ಧರಿಸಲು ಅವಕಾಶ ನೀಡಲಾಗಿದೆ. ಸೂಟು, ಏಕಬಣ್ಣದ ಶರ್ಟು ಧರಿಸಲೂ ಅವಕಾಶವಿದೆ. ಆಟಗಾರ್ತಿಯರಿಗೆ ಜೀನ್ಸ್, ಕಡುಬಣ್ಣದ ಸ್ಕರ್ಟ್, ಪ್ಯಾಂಟ್ ಧರಿಸಿ ಬರಲು ಅವಕಾಶವಿದೆ.
ಆದರೆ ಉಡುಪುಗಳು ಶುಭ್ರವಾಗಿರಬೇಕು. ಪ್ರಚೋದನಕಾರಿ ಬರಹ ಇರಬಾರದು. ಲೋಗೊ ಇರುವಂತಿಲ್ಲ. ಆದರೆ ಬೇಸ್‌ಬಾಲ್ ಕ್ಯಾಪ್, ಶಾರ್ಟ್‌ಗಳನ್ನು ಧರಿಸುವಂತಿಲ್ಲ. ಬೀಚ್‌ಗೆ ಹೋಗುವಾಗ ತೊಡುವ ದೊಗಲೆ ಉಡುಪು ನಿಷೇಧಿಸಲಾಗಿದೆ.