ADVERTISEMENT

Jerusalem Masters: ಆನಂದ್‌ ವಿರುದ್ಧ ಗೆದ್ದ ಅರ್ಜುನ್‌ಗೆ ಪ್ರಶಸ್ತಿ

ಚೆಸ್‌: ಜೆರುಸಲೇಂ ಮಾಸ್ಟರ್ಸ್‌

ಪಿಟಿಐ
Published 4 ಡಿಸೆಂಬರ್ 2025, 13:16 IST
Last Updated 4 ಡಿಸೆಂಬರ್ 2025, 13:16 IST
ಅರ್ಜುನ್ ಇರಿಗೇಶಿ
ಫಿಡೆ ವೆಬ್‌ಸೈಟ್‌ ಚಿತ್ರ
ಅರ್ಜುನ್ ಇರಿಗೇಶಿ ಫಿಡೆ ವೆಬ್‌ಸೈಟ್‌ ಚಿತ್ರ   

ಜೆರುಸಲೇಮ್: ಭಾರತದ ಆಟಗಾರರೇ ಇದ್ದ ಫೈನಲ್‌ನಲ್ಲಿ ಗ್ರ್ಯಾಂಡ್‌ಮಾಸ್ಟರ್ ಅರ್ಜುನ್ ಇರಿಗೇಶಿ ಅವರು ಸ್ವದೇಶದ ದಿಗ್ಗಜ ವಿಶ್ವನಾಥನ್ ಆನಂದ್ ಅವರನ್ನು ಸೋಲಿಸಿ ಜೆರುಸಲೇಂ ಮಾಸ್ಟರ್ಸ್‌ ಚೆಸ್ ಪ್ರಶಸ್ತಿ ಗೆದ್ದುಕೊಂಡರು.

ಇವರಿಬ್ಬರು ರ್‍ಯಾಪಿಡ್‌ ಸುತ್ತಿನ ಪಂದ್ಯಗಳನ್ನು ಡ್ರಾ ಮಾಡಿಕೊಂಡರು. ಬ್ಲಿಟ್ಝ್‌ ಸುತ್ತಿನಲ್ಲಿ ಅರ್ಜುನ್‌ ಬಿಳಿ ಕಾಯಿಗಳಲ್ಲಿ ಆಡಿದ ಮೊದಲ ಆಟ ಗೆದ್ದುಕೊಂಡರು. ನಂತರ 22 ವರ್ಷ ವಯಸ್ಸಿನ ತೆಲಂಗಾಣದ ಆಟಗಾರ  ಎರಡನೆ ಆಟ ಡ್ರಾ ಮಾಡಿಕೊಂಡು ಒಟ್ಟು 2.5–1.5ರಿಂದ ಜಯಗಳಿಸಿದರು.

‘ಬುಧವಾರ ಆಡಿದ ಎರರೂ ಪಂದ್ಯಗಳು (ಪೀಟರ್‌ ಸ್ವಿಡ್ಲರ್ ಮತ್ತು ಆನಂದ್ ವಿರುದ್ಧ) ಕಠಿಣವಾಗಿದ್ದವು. ನಂತರ ಆನಂದ್ ಸರ್‌ ವಿರುದ್ಧ ರ್‍ಯಾಪಿಡ್‌ ಸುತ್ತಿನಲ್ಲಿ ಇಬ್ಬರಿಗೂ ಅವಕಾಶಗಳಿದ್ದವು. ಆದರೆ ಬ್ಲಿಟ್ಝ್‌ನಲ್ಲಿ ನಾನು ಚೆನ್ನಾಗಿ ಆಡಿದೆ’ ಎಂದು ಅರ್ಜುನ್ ಪ್ರತಿಕ್ರಿಯಿಸಿದರು.

ADVERTISEMENT

ಅರ್ಜುನ್‌ ಪ್ರಶಸ್ತಿ ಜೊತೆ ₹49.50 ಲಕ್ಷ ನಗದು ಬಹುಮಾನ ಜೇಬಿಗಿಳಿಸಿದರು. ಆನಂದ್ ಅವರು ₹31.50 ಲಕ್ಷ ಬಹುಮಾನ ಗಳಿಸಿದರು.

ಅರ್ಜುನ್ ನಾಲ್ಕರ ಹಂತದ ಪಂದ್ಯದಲ್ಲಿ ರಷ್ಯದ ಪೀಟರ್ ಸ್ವಿಡ್ಲರ್ ಅವರನ್ನು ಮಣಿಸಿದರೆ, ಆನಂದ್ ಅವರು  ಇನ್ನೊಂದು ಸೆಮಿಫೈನಲ್‌ನಲ್ಲಿ ವಿಶ್ವ ಬ್ಲಿಟ್ಝ್ ಚಾಂಪಿಯನ್ ರಷ್ಯಾದ ಇಯಾನ್ ನಿಪೊಮ್‌ನಿಷಿ ಅವರನ್ನು ಸೋಲಿಸಿದರು.

ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಸ್ವಿಡ್ಲರ್‌ 2.5–1.5 ರಿಂದ ಸ್ವದೇಶದ ನಿಪೊಮ್‌ನಿಷಿ ಅವರನ್ನು ಸೋಲಿಸಿದರು.

ಈ ಟೂರ್ನಿಯು 12 ಆಟಗಾರರನ್ನು ಒಳಗೊಂಡಿದ್ದು, ರೌಂಡ್‌ರಾಬಿನ್ ಮಾದರಿಯಲ್ಲಿ ನಡೆಯುತ್ತದೆ. ಮೊದಲ ನಾಲ್ಕು ಸ್ಥಾನ ಗಳಿಸಿದವರು ಸೆಮಿಫೈನಲ್‌ ತಲುಪುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.