ADVERTISEMENT

ರಾಷ್ಟ್ರೀಯ ಜೂನಿಯರ್‌ ಅಥ್ಲೆಟಿಕ್ಸ್‌: ಕರ್ನಾಟಕದ ವೈಷ್ಣವಿಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 16:06 IST
Last Updated 10 ಅಕ್ಟೋಬರ್ 2025, 16:06 IST
ಚಿರಂತ್‌ ಪಿ.
ಚಿರಂತ್‌ ಪಿ.   

ಬೆಂಗಳೂರು: ಕರ್ನಾಟಕದ ವೈಷ್ಣವಿ ರಾವಲ್‌ ಅವರು ಭುನನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಸೋಮವಾರ ನಡೆದ 40ನೇ ರಾಷ್ಟ್ರೀಯ ಜೂನಿಯರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ 20 ವರ್ಷದೊಳಗಿನ ಮಹಿಳೆಯರ 1500 ಮೀಟರ್‌ ಓಟದಲ್ಲಿ ಚಿನ್ನದ ಪದಕ ಗೆದ್ದರು.

ವೈಷ್ಣವಿ ಅವರು ಫೈನಲ್‌ ಸ್ಪರ್ಧೆಯಲ್ಲಿ 4 ನಿಮಿಷ 29.19 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಮಧ್ಯಪ್ರದೇಶದ ರಾಧಾ ಯಾದವ್‌ (4:29.19) ಮತ್ತು ರಾಜಸ್ಥಾನದ ಮಂಜು ಚೌಧರಿ (4:30.93) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು.  

18 ವರ್ಷದೊಳಗಿನ ಪುರುಷರ 100 ಮೀಟರ್‌ ಓಟದಲ್ಲಿ ಕರ್ನಾಟಕದ ಚಿರಂತ್‌ ಪಿ. ಮತ್ತು ಸವಿನ್ ತಿಂಗಳಾಯ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಪಡೆದರು.

ADVERTISEMENT

10.71 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಚಿರಂತ್‌ ಅವರು ಕೂದಲೆಳೆಯ ಅಂತರದಲ್ಲಿ ಚಿನ್ನ ತಪ್ಪಿಸಿಕೊಂಡರು. ಅದೇ ಸಮಯದಲ್ಲಿ ಗುರಿ ತಲುಪಿದ್ದ ಮಹಾರಾಷ್ಟ್ರದ ಆದಿತ್ಯ ಫೈಸಲ್‌, ಫೋಟೊ ಫಿನಿಷ್‌ನಲ್ಲಿ ಚಿನ್ನ ತಮ್ಮದಾಗಿಸಿಕೊಂಡರು. ಸವಿನ್‌ 10.81 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. 

14 ವರ್ಷದೊಳಗಿನ ಟ್ರಯಥ್ಲಾನ್‌ನಲ್ಲಿ ಕರ್ನಾಟಕದ ಅದ್ವಿಕಾ ಕೆ.ಪಿ. (2739 ಅಂಕ) ಕಂಚಿನ ಪದಕ ಗೆದ್ದರು. ತಮಿಳುನಾಡಿನ ಆರತಿ ಎಸ್‌.ಕೆ (3147) ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರೆ, ಹರಿಯಾಣದ ಅನುಷ್ಕಾ (2768) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

ಹಿಮಾಂಶು ದಾಖಲೆ: 

ಏಷ್ಯನ್ ಯೂತ್ ಚಾಂಪಿಯನ್ ಹಿಮಾಂಶು ಜಾಖಡ್ ಅವರು ಪುರುಷರ 18 ವರ್ಷದೊಳಗಿನವರ ವಿಭಾಗದ ಜಾವೆಲಿನ್‌ ಸ್ಪರ್ಧೆಯಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದು, 20 ವರ್ಷದೊಳಗಿನ ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಳಿಸಿದರು.  

ಹಿಮಾಂಶು ಅವರು ಅರ್ಹತಾ ಸುತ್ತಿನಲ್ಲಿ 700 ಗ್ರಾಂ ತೂಕದ ಜಾವೆಲಿನ್ ಅನ್ನು 79.96 ಮೀಟರ್ ದೂರಕ್ಕೆ ಎಸೆದರು. ಈ ಮೂಲಕ 2014ರಲ್ಲಿ ವಿಜಯವಾಡದಲ್ಲಿ ಜಾವೆಲಿನ್‌ ತಾರೆ ನೀರಜ್ ಚೋಪ್ರಾ ಮಾಡಿದ್ದ (76.50 ಮೀ) ದಾಖಲೆಯನ್ನು ಮುರಿದರು.

ಸವಿನ್‌
ಹಿಮಾಂಶು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.