ಗುವಾಹಟಿ: ಪದಕದ ಭರವಸೆಗಳಾಗಿರುವ ತನ್ವಿ ಶರ್ಮಾ ಮತ್ತು ಉನ್ನತಿ ಹೂಡ ಅವರು ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಸಿಂಗಲ್ಸ್‌ನಲ್ಲಿ ತಮ್ಮ ಪಂದ್ಯಗಳನ್ನು ಗೆದ್ದು ಮಂಗಳವಾರ ಶುಭಾರಂಭ ಮಾಡಿದರು. ಇವರೂ ಸೇರಿ ಏಳು ಮಂದಿ ಎರಡನೇ ಸುತ್ತಿಗೆ ಮುನ್ನಡೆದರು.
ಅಗ್ರ ಶ್ರೇಯಾಂಕದ ತನ್ವಿ 15–2, 15–1 ರಿಂದ ಪೋಲೆಂಡ್‌ನ ವಿಕ್ಟೋರಿಯಾ ಕಲೆಟ್ಕಾ ಅವರನ್ನು ನಿರಾಯಾಸವಾಗಿ ಸೋಲಿಸಿದರು. ಗೆಲ್ಲಲು ಅವರು ತೆಗೆದುಕೊಂಡಿದ್ದು 11 ನಿಮಿಷಗಳನ್ನಷ್ಟೇ. ಎಂಟನೇ ಶ್ರೇಯಾಂಕದ ಉನ್ನತಿ ಹೂಡ 15–8, 15–9 ರಿಂದ ಹಾಂಗ್‌ಕಾಂಗ್‌ನ ಲಿಯು ಹೊಯಿ ಅನ್ನಾ ಅವರನ್ನು ಪರಾಭವಗೊಳಿಸಲು 23 ನಿಮಿಷ ಬಳಸಿದರು.
ರಕ್ಷಿತಾ ಶ್ರೀ ಅವರು 15–5, 15–9 ರಿಂದ ಕೆನಡಾದ ಲೂಸಿ ಯಂಗ್ ವಿರುದ್ಧ ಗೆಲುವು ದಾಖಲಿಸಿ ಅಂತಿಮ 32ರ ಸುತ್ತಿಗೆ ಮುನ್ನಡೆದರು.
ಬಾಲಕರ ವಿಭಾಗದಲ್ಲಿ 11ನೇ ಶ್ರೇಯಾಂಕದ ರೌನಕ್ ಚೌಹಾನ್ 15–3, 15–6 ರಿಂದ ಶ್ರೀಲಂಕಾದ ತಿಸತ್ ರೂಪತುಂಗ ಅವರನ್ನು ಹಿಮ್ಮೆಟ್ಟಿಸಿದರೆ, 15ನೇ ಶ್ರೇಯಾಂಕದ ಸೂರ್ಯಾಕ್ಷ ರಾವತ್ 15–5, 15–8 ರಿಂದ ಟರ್ಕಿಯ ಯಿಜಿಟ್‌ಕನ್ ಇರೋಲ್ ಅವರನ್ನು ಮಣಿಸಿದರು.
ಜ್ಞಾನ ದತ್ತು 15–10, 15–13ರಲ್ಲಿ ಬ್ರೆಜಿಲ್‌ನ ಜೋಕಿಮ್ ಮೆಂಡೋನ್ಸಾ ವಿರುದ್ಧ ಜಯಗಳಿಸಿದರು. ಅವರು ಪ್ರಿಕ್ವಾರ್ಟರ್‌ಫೈನಲ್‌ಗೆ ಸ್ಥಾನ ಕಾದಿರಿಸುವ ಪಂದ್ಯದಲ್ಲಿ ಸೂರ್ಯಾಕ್ಷ ಅವರನ್ನು ಎದುರಿಸಲಿದ್ದಾರೆ.
ಹಿನ್ನಡೆ:
ಸಿಂಗಲ್ಸ್‌ನಲ್ಲಿ ಭಾರತಕ್ಕೆ ಒದಗಿದ ಏಕೈಕ ಹಿನ್ನಡೆಯೆಂದರೆ ಏಷ್ಯನ್ ಜೂನಿಯರ್ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತರಾದ ವೆನ್ನಲ ಕೆ. ಸೋಲು. ಲಯಕ್ಕೆ ಪರದಾಡಿದ ಅವರು ಎರಡನೇ ಸುತ್ತಿನಲ್ಲಿ 6–15, 5–15ರಲ್ಲಿ ಐದನೇ ಶ್ರೇಯಾಂಕದ ತೊನ್ರುಗ್ ಸೇಹೆಂಗ್ (ಥಾಯ್ಲೆಂಡ್) ಅವರಿಗೆ ಮಣಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.