ADVERTISEMENT

ಜೂನಿಯರ್‌ ಏಷ್ಯಾ ಕಪ್‌ ಹಾಕಿ: ಪಾಕ್‌ ವಿರುದ್ಧ ಗೆಲುವು ಸಾಧಿಸಿದ ಭಾರತ ತಂಡಕ್ಕೆ ಕಿರೀಟ

ಪಿಟಿಐ
Published 2 ಜೂನ್ 2023, 2:56 IST
Last Updated 2 ಜೂನ್ 2023, 2:56 IST
   

ಸಲಾಲ,ಒಮನ್: ಜಿದ್ದಾಜಿದ್ದಿನ ಪೈಪೋಟಿಯ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 2–1 ಗೋಲುಗಳಿಂದ ಮಣಿಸಿದ ಭಾರತದ ಯುವ ಆಟಗಾರರು ಜೂನಿಯರ್‌ ಏಷ್ಯಾ ಕಪ್‌ ಹಾಕಿ ಟೂರ್ನಿಯಲ್ಲಿ ಚಾಂಪಿಯನ್‌ ಆದರು.

ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಗೋಲು ಗಳಿಸಿದ ಅಂಗದ್‌ ಬೀರ್‌ ಸಿಂಗ್‌ (13ನೇ ನಿ.) ಮತ್ತು ಅರಿಜೀತ್‌ ಸಿಂಗ್‌ ಹುಂದಲ್ (20ನೇ ನಿ.) ಅವರು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಕೊನೆಯ ನಿಮಿಷಗಳಲ್ಲಿ ಪಾಕ್‌ ಆಟಗಾರರು ಒಡ್ಡಿದ ಪ್ರಬಲ ಸವಾಲನ್ನು ಉತ್ತಮ್‌ ಸಿಂಗ್ ನೇತೃತ್ವದ ಭಾರತ ತಂಡ, ಸಮರ್ಥವಾಗಿ ಬದಿಗೊತ್ತಿತು.

ADVERTISEMENT

ಆಕ್ರಮಣಕಾರಿ ಆಟವಾಡಿದ ಭಾರತ, ಮೊದಲ ಎರಡು ಕ್ವಾರ್ಟರ್‌ಗಳಲ್ಲಿ ಆಟದ ಮೇಲೆ ಪೂರ್ಣ ನಿಯಂತ್ರಣ ಸಾಧಿಸಿತು. ಎರಡು ಫೀಲ್ಡ್‌ ಗೋಲುಗಳ ಮೂಲಕ ವಿರಾಮದ ವೇಳೆಗೆ 2–0 ರಲ್ಲಿ ಮುನ್ನಡೆ ಸಾಧಿಸಿತು.

ಮೂರನೇ ಕ್ವಾರ್ಟರ್‌ನಲ್ಲಿ ಪಾಕ್‌ ತಂಡ ಮರುಹೋರಾಟ ನಡೆಸಿತು. 38ನೇ ನಿಮಿಷದಲ್ಲಿ ಬಶಾರತ್‌ ಅಲಿ ಗಳಿಸಿದ ಗೋಲಿನಿಂದ ಹಿನ್ನಡೆಯನ್ನು 1–2 ಕ್ಕೆ ತಗ್ಗಿಸಿತು. ಕೊನೆಯ ಕ್ವಾರ್ಟರ್‌ನಲ್ಲಿ ಎದುರಾಳಿ ತಂಡದವರು ಸಮಬಲದ ಗೋಲಿಗೆ ಪ್ರಯತ್ನಿಸಿದರೂ, ಭಾರತದ ಗೋಲ್‌ಕೀಪರ್‌ ಶಶಿಕುಮಾರ್‌ ಮೋಹಿತ್‌ ಹಾಗೂ ಡಿಫೆಂಡರ್‌ಗಳು ತಡೆಯಾಗಿ ನಿಂತರು.

ಈ ಗೆಲುವಿನ ಮೂಲಕ ಭಾರತ ತಂಡವು ಮಲೇಷ್ಯಾದಲ್ಲಿ ನಡೆಯಲಿರುವ ಜೂನಿಯರ್‌ ವಿಶ್ವಕಪ್‌ ಟೂರ್ನಿಗೆ ಅರ್ಹತೆ ಪಡೆದುಕೊಂಡಿತು.

ನಾಲ್ಕನೇ ಪ್ರಶಸ್ತಿ: ಜೂನಿಯರ್‌ ಏಷ್ಯಾ ಕಪ್‌ನಲ್ಲಿ ಭಾರತಕ್ಕೆ ಲಭಿಸಿದ ನಾಲ್ಕನೇ ಪ್ರಶಸ್ತಿ ಇದು. ಈ ಹಿಂದೆ 2004, 2008 ಮತ್ತು 2015 ರಲ್ಲಿ ಚಾಂಪಿಯನ್‌ ಆಗಿತ್ತು. ಪಾಕಿಸ್ತಾನವು 1987, 1992 ಮತ್ತು 1996 ರಲ್ಲಿ ಕಿರೀಟ ಗೆದ್ದುಕೊಂಡಿದೆ.

ತಲಾ ₹ 2 ಲಕ್ಷ ಬಹುಮಾನ

ಏಷ್ಯಾ ಕಪ್‌ ಗೆದ್ದ ಭಾರತ ತಂಡದ ಸದಸ್ಯರಿಗೆ ಹಾಕಿ ಇಂಡಿಯಾ ತಲಾ ₹ 2 ಲಕ್ಷ ಹಾಗೂ ಕೋಚಿಂಗ್‌ ಸಿಬ್ಬಂದಿಗೆ ತಲಾ ₹ 1 ಲಕ್ಷ ನಗದು ಬಹುಮಾನ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.