
ನವದೆಹಲಿ: ಕರ್ನಾಟಕದ ಅನುಷ್ಕಾ ತೋಕೂರು ಅವರು ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಜೂನಿಯರ್ ಶೂಟಿಂಗ್ ವಿಶ್ವಕಪ್‌ನ 50 ಮೀ. ತ್ರೀ ಪೊಸಿಷನ್ಸ್ ಸ್ಪರ್ಧೆಯಲ್ಲಿ ಭಾನುವಾರ ಚಿನ್ನದ ಪದಕ ಗೆದ್ದುಕೊಂಡರು. ಇದು, ಈ ಟೂರ್ನಿಯಲ್ಲಿ ಅವರಿಗೆ ಎರಡನೇ ಚಿನ್ನ. ಮೊದಲ ದಿನವಾದ ಗುರುವಾರ 50 ಮೀ. ರೈಫಲ್ ಪ್ರೋನ್ ಸ್ಪರ್ಧೆಯಲ್ಲಿ ಅವರು ಸ್ವರ್ಣ ಜಯಿಸಿದ್ದರು.
ಕ್ವಾಲಿಫಿಕೇಷನ್ ಸುತ್ತಿನಲ್ಲಿ 585 ಸ್ಕೋರ್‌ಗಳೊಂದಿಗೆ ಅಗ್ರಸ್ಥಾನ ಪಡೆದಿದ್ದ ಮಂಗಳೂರಿನ ಹುಡುಗಿ, ಫೈನಲ್ ಹಣಾಹಣಿಯಲ್ಲೂ ಲಯ ಮುಂದುವರಿಸಿದರು. 461 ಸ್ಕೋರ್ ಗಳಿಸಿ ಚನ್ನಕ್ಕೆ ಮುತ್ತಿಕ್ಕಿದರು. ಸ್ವತಂತ್ರ ತಟಸ್ಥ ಸ್ಪರ್ಧಿಗಳಾದ (ಎಎನ್‌ಎ) ಅನಸ್ತೇಷಿಯಾ ಸೊರೊಕಿನಾ (454.9) ಹಾಗೂ ಮರಿಯಾ ಕ್ರುಗ್ಲೊವಾ (444) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ತಮ್ಮದಾಗಿಸಿಕೊಂಡರು.
18 ವರ್ಷ ವಯಸ್ಸಿನ ಅನುಷ್ಕಾ ಅವರು ಕಜಾಕಸ್ತಾನದಲ್ಲಿ ಆಗಸ್ಟ್‌ನಲ್ಲಿ ನಡೆದ ಏಷ್ಯನ್ ಶೂಟಿಂಗ್ ಚಾಂಪಿಯನ್‌ಷಿಪ್‌ನ ಜೂನಿಯರ್ ಮಹಿಳೆಯರ 50 ಮೀ. ರೈಫಲ್ ತ್ರೀ ಪೊಸಿಷನ್ಸ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದರು.
ಅದ್ರಿಯಾನ್‌ಗೆ ಬೆಳ್ಳಿ: ಉದಯೋನ್ಮುಖ ಶೂಟರ್ ಅದ್ರಿಯಾನ್ ಕರ್ಮಾಕರ್ ಅವರು ಜೂನಿಯರ್ ಪುರುಷರ 50 ಮೀ. ರೈಫಲ್ ತ್ರೀ ಪೊಸಿಷನ್ಸ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.
ಕ್ವಾಲಿಫಿಕೇಷನ್ ಸುತ್ತಿನಲ್ಲಿ 587 ಪಾಯಿಂಟ್ಸ್ ಗಳಿಸಿ ಅಗ್ರಸ್ಥಾನ ಪಡೆದ ಅದ್ರಿಯಾನ್, ಫೈನಲ್ ಸ್ಪರ್ಧೆಯಲ್ಲಿ (454.8) ಎರಡನೇ ಸ್ಥಾನ ಪಡೆದರು. 459.9 ಪಾಯಿಂಟ್ಸ್ ಪಡೆದ ಡಿಮಿಟ್ರಿ ಪಿಮೆನೊವ್ (ಎಎನ್‌ಎ) ಚಿನ್ನದ ಪದಕ ತಮ್ಮದಾಗಿಸಿಕೊಂಡರು. 441 ಸ್ಕೋರ್‌ನೊಂದಿಗೆ ಕಮೀಲ್ ಎನ್. (ಎಎನ್‌ಎ) ಕಂಚು ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.